ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಸಿದ ಬಿಎಂಟಿಸಿ

Update: 2019-06-14 17:11 GMT

ಬೆಂಗಳೂರು, ಜೂ.14: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರ ಏರಿಕೆಯ ಬರೆ ಹಾಕಿದೆ. 100 ರೂ. ನಿಂದ 250 ರೂ.ವರೆಗೆ ಬಸ್ ಪಾಸ್ ದರವನ್ನು ಹೆಚ್ಚಳ ಮಾಡಲಾಗಿದೆ. ಕೆಸ್ಸಾರ್ಟಿಸಿಯೂ ವಿದ್ಯಾರ್ಥಿ ಬಸ್ ಪಾಸ್ ದರವನ್ನು ಜಾಸ್ತಿ ಮಾಡಲು ತೀರ್ಮಾನಿಸಿದ್ದು, ಅಧಿಕೃತ ಆದೇಶ ಹೊರ ಬಿದ್ದಿದೆ.

ಬಿಎಂಟಿಸಿಯು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಂದ ಕೇವಲ 200 ರೂ. ಸೇವಾ ಶುಲ್ಕ ಪಡೆದು ಪಾಸ್‌ಗಳನ್ನು ವಿತರಣೆ ಮಾಡಲಿದೆ. ಸ್ಮಾರ್ಟ್‌ಕಾರ್ಡ್ ನವೀಕರಣಕ್ಕೆ 170 ರೂ. ಶುಲ್ಕ ನಿಗದಿಪಡಿಸಲಾಗಿದೆ. ದರ ಏರಿಕೆಯ ಬಿಸಿಯು ಈ ವಿದ್ಯಾರ್ಥಿಗಳಿಗೆ ತಟ್ಟುವುದಿಲ್ಲ.

ಪ್ರೌಢಶಾಲಾ ವಿದ್ಯಾರ್ಥಿಗಳ ಬಸ್ ದರವು ಸೇವಾ ಶುಲ್ಕ ಹೊರತುಪಡಿಸಿ 100 ರೂ., ಪಿಯುಸಿ 150 ರೂ., ಪದವಿ, ಸ್ನಾತಕೋತ್ತರ ಪದವಿ 160 ರೂ., ವೃತ್ತಿಪರ ಕಾಲೇಜು 250 ರೂ., ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು 240 ರೂ. ಹಾಗೂ ಸಂಜೆ ಕಾಲೇಜು ವಿದ್ಯಾರ್ಥಿಗಳ ಬಸ್ ದರವು 200 ರೂ. ಹೆಚ್ಚಳವಾಗಿದೆ. 2013-14ರಲ್ಲಿ ಪಾಸ್ ದರ ಜಾಸ್ತಿ ಮಾಡಲಾಗಿತ್ತು. ಆನಂತರ 2014-15 ರಿಂದ 2017-18ರವರೆಗೆ ಪ್ರತಿ ವರ್ಷ ಸೇವಾ ಶುಲ್ಕವನ್ನು 30 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಸೇವಾ ಶುಲ್ಕವು 200 ರೂ. ಇದೆ.

2019-20ನೇ ಸಾಲಿನ ವಿದ್ಯಾರ್ಥಿ ಪಾಸ್‌ಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವಿಕರಿಸಿ, ಸ್ಮಾರ್ಟ್‌ಕಾರ್ಡ್ ಪಾಸ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೊಸ ಸ್ಮಾರ್ಟ್‌ಕಾರ್ಡ್ ಅಥವಾ ಹಿಂದಿನ ಸಾಲಿನ ಸ್ಮಾರ್ಟ್‌ಕಾರ್ಡ್ ನವೀಕರಣಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಪದವಿ, ವೃತ್ತಿಪರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ವಿತರಣೆ ಬಗ್ಗೆ ಶೀಘ್ರದಲ್ಲೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಬಿಎಂಟಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಪಠ್ಯಕ್ರಮ ಹೊಂದಿರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅರ್ಜಿಗಳನ್ನು ಸಂಸ್ಥೆಯೇ ಪರಿಶೀಲಿಸಿ ಅನುಮೋದನೆ ನೀಡಲಾಗುವುದು. ರಾಜ್ಯ ಪಠ್ಯಕ್ರಮ ಹೊರತುಪಡಿಸಿ, ಇತರೆ ಶಿಕ್ಷಣ ಸಂಸ್ಥೆಗಳು ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಪಾಸಿನ ಅರ್ಜಿಯನ್ನು ಅನುಮೋದಿಸಿದ ಬಳಿಕ ವಿದ್ಯಾರ್ಥಿಗಳು ತಮ್ಮ ಸಮೀಪದ ಪಾಸು ವಿತರಣಾ ಕೇಂದ್ರ, ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಂಡ ಸ್ವೀಕೃತಿ ಪತ್ರ, ಶಾಲಾ, ಕಾಲೇಜಿನ ಗುರುತಿನ ಚೀಟಿ, ಶುಲ್ಕ ಪಾವತಿ ರಸೀದಿ, ಶಾಲಾ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ಪತ್ರವನ್ನು ಹಾಜರುಪಡಿಸಬೇಕು. ರವಿವಾರ ಮತ್ತು ರಜಾ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಎಲ್ಲ ಪ್ರಮುಖ ಬಸ್ ನಿಲ್ದಾಣಗಳು, ಟಿಟಿಎಂಸಿಗಳಲ್ಲಿ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News