ಜೂ.20ಕ್ಕೆ ಹಿರಿಯ ಸಾಹಿತಿಗಳ 20 ಮೌಲಿಕ ಕೃತಿಗಳ ಲೋಕಾರ್ಪಣೆ

Update: 2019-06-14 17:13 GMT

ಬೆಂಗಳೂರು, ಜೂ.14: ಕನ್ನಡ ಪುಸ್ತಕ ಪ್ರಾಧಿಕಾರ ಹೊರತಂದಿರುವ ಕನ್ನಡ ಸಾಹಿತ್ಯ ಕ್ಷೇತ್ರದ ಹೆಸರಾಂತ ಹಿರಿಯ ಸಾಹಿತಿಗಳ 20 ಮೌಲಿಕ ಕೃತಿಗಳ ಲೋಕಾರ್ಪಣೆ ಸಮಾರಂಭ ಜೂ.20ರಂದು ಕನ್ನಡಭವನದಲ್ಲಿ ನಡೆಯಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದರು.

ಶುಕ್ರವಾರ ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತಿ ಟಿ.ಎಸ್.ವೆಂಕಣ್ಣಯ್ಯ ಸಾಹಿತ್ಯ ಸಂಪುಟ ಸಂಶೋಧನಾ ಗ್ರಂಥವಾಗಿದ್ದು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಕಳೆದ ಆರು ವರ್ಷಗಳಿಂದ ಲಭ್ಯವಿರದ ಪು.ತಿ.ನ ಹಾಗೂ ತೀ.ನಂ.ಶ್ರೀ ಸಮಗ್ರ ಗದ್ಯಗಳನ್ನು ಮರು ಮುದ್ರಿಸಲಾಗಿದೆ ಎಂದು ಹೇಳಿದರು.

ಡಾ.ಬಿ.ಟಿ.ಲಲಿತಾನಾಯಕ್‌ರ 2 ಸಮಗ್ರ ಸಾಹಿತ್ಯ ಕೃತಿಗಳು, ಕವಿ ಡಾ. ಸಿದ್ಧಲಿಂಗಯ್ಯ ಅವರ ಸಮಗ್ರ ಸಾಹಿತ್ಯ ಸಂಪುಟ 4, ಡಾ.ಎಲ್.ಹನುಮಂತಯ್ಯನವರ 2 ಸಂಪುಟಗಳು, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ದೇವಯ್ಯ ಹರವೆ ಹಾಗೂ ಸಿರಿಲೋಕ ತುಳುನಾಡು ಒಂದು ಅಧ್ಯಯನ ಸಂಪುಟಗಳು ಬಿಡುಗಡೆಗೊಳ್ಳಲಿವೆ.

ಶತಮಾನ ಕಂಡ ಸಾಹಿತಿಗಳಾದ ಎಂ.ಕೆ.ಇಂದಿರಾ, ಬಿ.ಜಿ.ಎಲ್ ಸ್ವಾಮಿ ಅವರ ಸಾಹಿತಿಗಳ ಸಾಹಿತ್ಯವಾಚಿಕೆ, ಮಕ್ಕಳ ಹೊಸ ಕಾವ್ಯ, ಡುಂಡಿರಾಜ್‌ರ ಡುಂಡಿಸೂಚಿ ಆಯ್ದ ಹನಿಗವನಗಳು ಕೃತಿಗಳನ್ನು ತರಲಾಗಿದೆ. ಏಷ್ಯಾ ಖಂಡದಲ್ಲೇ ಪ್ರಪ್ರಥಮ ಸಹಕಾರಿ ಸಂಘ ಸ್ಥಾಪನೆಗೆ ಕಾರಣಕರ್ತರಾದ ಡಾ.ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರ ಕೃತಿಗಳನ್ನು ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಲೋಕಾರ್ಪಣೆ ಮಾಡಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದರು.

ಆರೋಗ್ಯ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 25 ಕೃತಿಗಳು ಹಾಗೂ ಎಂ.ಗೋಪಾಲಕೃಷ್ಣ ಅಡಿಗ, ಟಿ.ಸುನಂದಮ್ಮ, ವಾಣಿ ಮುಂತಾದವರ ಆಯ್ದ ಕೃತಿಗಳ ಸಾಹಿತ್ಯ ವಾಚಿಕೆ ಮುದ್ರಣ ಹಂತದಲ್ಲಿದೆ. ಈ ವರ್ಷ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಜತೆಗೆ ಪರಿಶಿಷ್ಟ ಪಂಗಡದ ಸಾಹಿತಿಗಳ ಕೃತಿಗಳ ಮುದ್ರಣಕ್ಕೆ ಧನಸಹಾಯ ನೀಡಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಮಂಗಳೂರು, ಕಲಬುರಗಿ, ಬೆಳಗಾವಿಯಲ್ಲಿ ಪುಸ್ತಕ ಮಾರಾಟ ಮೇಳ ಏರ್ಪಡಿಸಲಾಗುವುದು. ಅಕ್ಟೋಬರ್ ತಿಂಗಳಲ್ಲಿ 2ನೆ ಪ್ರಕಾಶಕರ ಸಮ್ಮೇಳನವನ್ನು ಧಾರವಾಡದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಜಾಣ ಜಾಣೆಯರ ಬಳಗ ಯೋಜನೆಯಡಿ ಪ್ರತಿ ಕಾಲೇಜಿನಿಂದ ವರ್ಷದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ರೂಪಿಸಲಾಗಿದ್ದು, 170ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಸಗಟು ಖರೀದಿ ಯೋಜನೆಯಡಿ 2016ನೇ ಸಾಲಿನಲ್ಲಿ ಸುಮಾರು 2500 ಶೀರ್ಷಿಕೆಗಳ ಕೃತಿಗಳು ಬಂದಿವೆ. ಇದಕ್ಕಾಗಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಸದ್ಯದಲ್ಲೇ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳ ಕುರಿತು ಅಭಿಪ್ರಾಯ ಮಂಡನೆ ಸ್ಪರ್ಧೆ ಅಥವಾ ರಸಪ್ರಶ್ನೆ ಸ್ಪರ್ಧೆ ನಡೆಸಲು ಅರ್ಜಿ ಕರೆಯಲಾಗಿದ್ದು, ಜು.10 ಅಂತಿಮ ದಿನವಾಗಿದೆ. 2018ನೇ ಸಾಲಿನ ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನಕ್ಕೆ ಆಸಕ್ತರು ಜು.15ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News