ಆಸ್ಟ್ರೇಲಿಯಕ್ಕೆ-ಶ್ರೀಲಂಕಾದ ಸವಾಲು

Update: 2019-06-14 18:33 GMT

 ಲಂಡನ್, ಜೂ.14: ವಿಶ್ವಕಪ್‌ನ ಎರಡು ಪಂದ್ಯಗಳು ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಆಘಾತಗೊಂಡಿರುವ ಶ್ರೀಲಂಕಾ ತಂಡ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ.

    ಆಸ್ಟ್ರೇಲಿಯ ಆಡಿರುವ ಮೂರು ಪಂದ್ಯಗಳ ಪೈಕಿ 2ರಲ್ಲಿ ಜಯ ಗಳಿಸಿದೆ. ಆದರೆ ಶ್ರೀಲಂಕಾ ಆಡಬೇಕಿದ್ದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧದ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ 2 ಪಾಯಿಂಟ್‌ಗಳು ಲಂಕಾದ ಖಾತೆಗೆ ಜಮೆ ಆಗಿದೆ. ಒಂದು ಪಂದ್ಯ ಗೆದ್ದರೆ ಸಿಗುವ ಅಂಕಗಳು ಲಂಕಾದ ಖಾತೆಗೆ ಜಮೆ ಆಗಿದೆ. ಲಂಕಾ 1996ರ ವಿಶ್ವಕಪ್ ಚಾಂಪಿಯನ್. ನಾಲ್ಕು ಪಂದ್ಯಗಳಲ್ಲಿ ಇದೀಗ ಕೇವಲ ಅಫ್ಘಾನಿಸ್ತಾನ ವಿರುದ್ಧ ಮಾತ್ರ ಗೆಲುವು ದಾಖಲಿಸಿದೆ. ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಭಾರತದ ವಿರುದ್ಧ ಮಾತ್ರ ಆಸ್ಟ್ರೇಲಿಯ ಸೋಲು ಅನುಭವಿಸಿದೆ. ಡೇವಿಡ್ ವಾರ್ನರ್ ಆಸ್ಟ್ರೇಲಿಯ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಒಂದು ಶತಕ ಮತ್ತು 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಕ್ಕೆ 2 ಬಾರಿ 300ಕ್ಕೂ ಅಧಿಕ ರನ್ ಗಳಿಸಲು ನೆರವಾಗಿದ್ದಾರೆ.

ಪಾಕಿಸ್ತಾನ ವಿರುದ್ಧ ವಾರ್ನರ್ 111 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನಿಷೇಧದ ಸಜೆ ಅನುಭವಿಸಿ ಹೊರಬಂದಿರುವ ವಾರ್ನರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್ ಕಳೆದ ಎರಡು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯದ ಮಧ್ಯಮ ಸರದಿಯಲ್ಲಿ ಸಮಸ್ಯೆ ಇದೆ. ಪಾಕಿಸ್ತಾನ , ಶ್ರೀಲಂಕಾ ಮತ್ತ್ತು ಭಾರತದ ವಿರುದ್ಧ ಪಂದ್ಯದಲ್ಲಿ ಇದು ಗೊತ್ತಾಗಿದೆ. ಆಸ್ಟ್ರೇಲಿಯದ ಇಬ್ಬರು ಬೌಲರ್‌ಗಳು ಮಿಂಚಿದ್ದಾರೆ. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ 9 ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮೆ ಮಾಡಿದ್ದಾರೆ.

 ಶ್ರೀಲಂಕಾದ ಬೌಲರ್ ನುವಾನ್ ಪ್ರದೀಪ್ ಗಾಯಗೊಂಡು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಚೇತರಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. ವೇಗಿ ಲಸಿತ್ ಮಾಲಿಂಗ ತನ್ನ ಅತ್ತೆ ನಿಧನರಾದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದರು. ಶನಿವಾರದ ಪಂದ್ಯದಲ್ಲಿ ಅವರು ಆಡಲಿದ್ದಾರೆ.

 ದಿಮುತ್ ಕರುಣರತ್ನೆ ನಾಯಕತ್ವದ ಶ್ರೀಲಂಕಾ ತಂಡದ ಬ್ಯಾಟಿಂಗ್ ನ್ಯೂಝಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ 50 ಓವರ್ ಪೂರ್ತಿ ಆಡುವಲ್ಲಿ ವಿಫಲರಾಗಿದೆ. ನ್ಯೂಝಿಲೆಂಡ್ ವಿರುದ್ಧ 14ಕ್ಕೆ 5 ವಿಕೆಟ್ ಮತ್ತು ಅಫ್ಘಾನಿಸ್ತಾನ ವಿರುದ್ಧ 36ಕ್ಕೆ 7 ವಿಕೆಟ್ ಕಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News