ಕುಂಟು ನೇರಳೆಯ ಸಿಹಿ ಸಿಹಿ ನೆನಪು

Update: 2019-06-15 13:12 GMT

ಕುಂಟಲಕಾಯಿ ಅಥವಾ ಕುಂಟುನೇರಳೆ ಹಣ್ಣು ಈ ಹೆಸರು ಹೊಸ ತಲೆಮಾರಿಗೆ ಬಹುಶಃ ಗೊತ್ತಿರದು ಎಂದೆನಿಸುತ್ತಿದೆ. ಅಷ್ಟರ ಮಟ್ಟಿಗೆ ಅವು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳಿವಿನಂಚಿಗೆ ಸಾಗುತ್ತಿದೆ ಮತ್ತು ಅವು ಲಭ್ಯವಿರುವೆಡೆ ಅವುಗಳ ಕುರಿತಂತೆ ನಿರ್ಲಕ್ಷ ತೋರಲಾಗುತ್ತಿದೆ.

 ನೇರಳೆ ಹಣ್ಣಿನ ವಿಶಿಷ್ಟ ತಳಿಗಳಲ್ಲೊಂದಾದ ಇದನ್ನು ಯಾರೂ ನೆಟ್ಟು ನೀರೆರೆದು ಗೊಬ್ಬರವುಣಿಸಿ ಬೆಳೆಸುವುದಿಲ್ಲ. ಸಾಮಾನ್ಯವಾಗಿ ಗುಡ್ಡ ಪ್ರದೇಶಗಳಲ್ಲಿ ಸಿಗುವ ಈ ಪುಟ್ಟ ಕಾಡು ಹಣ್ಣು ಅತ್ಯಂತ ರುಚಿಕರ. ಹೊರ ನೋಟಕ್ಕೆ ಕಪ್ಪು ದ್ರಾಕ್ಷಿಯಂತೆ ಕಾಣುತ್ತದಾದರೂ, ಆಕಾರದಲ್ಲಿ ಅದಕ್ಕಿಂತ ತುಸು ಚಿಕ್ಕದಾದ ಕುಂಟು ನೇರಳೆಯನ್ನು ತುಳುವಿನಲ್ಲಿ ‘ಕುಂಟಲಪರ್‌ಂದ್’ ಎಂದೂ ಬ್ಯಾರಿಯಲ್ಲಿ ‘ಕರಿಂಙೆ ಪಲ’ ಎಂದೂ ಹೇಳುತ್ತಾರೆ.

ಹೊರಮೈ ಕಪ್ಪಗಿರುವ ಈ ಹಣ್ಣನ್ನು ತಿಂದರೆ ನಾಲಿಗೆಯಲ್ಲಿ ಅದರ ಮೂಲ ನೇರಳೆ ಬಣ್ಣ ಮೆತ್ತಿಕೊಳ್ಳುತ್ತದೆ.

ನಾವೆಲ್ಲಾ ಶಾಲೆಗೆ ಹೋಗುವ ಕಾಲದಲ್ಲಿ ಕುಂಟಲಕಾಯಿಯ ಸೀಸನ್‌ನಲ್ಲಿ ನಮ್ಮ ಅಂಗಿ ಚಡ್ಡಿಯ ತುಂಬಾ ನೇರಳೆ ಕಲೆ ಮೆತ್ತಿಕೊಂಡಿರುವುದು ಅತೀ ಸಾಮಾನ್ಯವಾಗಿತ್ತು. ಡಿಸೆಂಬರ್ ತಿಂಗಳಿಗಾಗುವಾಗ ಹೂ ಬಿಡುವ ಕುಂಟಲಕಾಯಿ ಗಿಡದಲ್ಲಿ ಜನವರಿ, ಫೆಬ್ರವರಿಗಾಗುವಾಗ ಕಾಯಿಗಳಾಗುತ್ತವೆ. ಮಾರ್ಚ್ ತಿಂಗಳಲ್ಲಿ ಹಣ್ಣಾಗುವ ಕುಂಟಲಹಣ್ಣು ಜೂನ್ ತಿಂಗಳವರೆಗೂ ಧಾರಾಳವಾಗಿ ಸಿಗುತ್ತಿತ್ತು. ಒಮ್ಮೆ ಒಳ್ಳೆಯ ಮಳೆ ಬಿದ್ದ ಬಳಿಕ ನೀರೆಳೆದು ಅದರ ಸಿಹಿ ಕಡಿಮೆಯಾಗಿ ಸಪ್ಪೆಯಾಗ ತೊಡಗುತ್ತದೆ. ಮಾರ್ಚ್‌ನಿಂದ ಮೇವರೆಗೆ ಕುಂಟಲಹಣ್ಣು ಸಿಹಿಯಾಗಿರುತ್ತದೆ.

ನಾವು ಶಾಲೆಗೆ ಹೋಗುವ ದಿನಗಳಲ್ಲಿ ಮುಂಜಾನೆ ಶಾಲೆಗೆ ಹೋಗುವ ಹೊತ್ತಿಗೆ ರಸ್ತೆ ಬದಿ, ಕಾಲು ದಾರಿಯ ಬದಿ ಸಿಗುವ ಕುಂಟಲಹಣ್ಣುಗಳನ್ನು ಕೀಳಿ ತಿನ್ನುತ್ತಿದ್ದೆವು. ಶಾಲೆಯಿಂದ ಮರಳಿ ಮನೆಗೆ ಬರುವ ವೇಳೆ ಗುಡ್ಡಗಳಿಗೆ ನುಗ್ಗಿ ಕುಂಟಲಹಣ್ಣಿನ ಮರಗಳಿಗೆ ಹತ್ತಿ ಹಣ್ಣು ಕೊಯ್ದು ಅಂಗಿ ಮತ್ತು ಚಡ್ಡಿಯ ಕಿಸೆಗಳಲ್ಲಿ ತುಂಬಿಸಿಕೊಂಡೇ ಇಳಿಯುತ್ತಿದ್ದೆವು. ಸಾಮಾನ್ಯವಾಗಿ ನೀಲಿ ಚಡ್ಡಿ ಹಾಕುತ್ತಿದ್ದುದರಿಂದ ಚಡ್ಡಿಯ ಜೇಬಿನಲ್ಲಾಗುವ ಕುಂಟಲಹಣ್ಣಿನ ಕಲೆ ಎದ್ದು ಕಾಣುತ್ತಿರಲಿಲ್ಲ. ಆದರೆ ಅಂಗಿಯ ಕಿಸೆಯ ತುಂಬಾ ಶಾಯಿ ಪೆನ್ನು ಶಾಯಿ ಕಾರಿದಂತೆ ಕುಂಟಲಹಣ್ಣಿನ ಕಲೆ ಎದ್ದು ಕಾಣುತ್ತಿತ್ತು.ಅದಕ್ಕಾಗಿ ನಾನು ಅದೆಷ್ಟೋ ಬಾರಿ ಅಮ್ಮನ ಕೈಯಿಂದ ಪೆಟ್ಟು ತಿಂದದ್ದಿದೆ. ಮೊದ ಮೊದಲು ಇಂಕ್ ಪೆನ್ ಶಾಯಿ ಕಾರಿದ್ದು ಎಂದು ಅಮ್ಮನಿಗೆ ಸುಳ್ಳು ಹೇಳಿ ಪೆಟ್ಟು ತಪ್ಪಿಸಿದ್ದೆ. ಮತ್ತೆ ಅಮ್ಮನಿಗೆ ಸತ್ಯ ಗೊತ್ತಾಗಿತ್ತು.

ಅಂಗಿಯ ಕಿಸೆಯಲ್ಲಿ ತುಂಬಿಸಿದರೆ ಕಲೆಯಾಗುತ್ತದೆಂದು ಗೊತ್ತಿದ್ದರೂ ಮತ್ತೆ ಮತ್ತೆ ಅಂಗಿಯ ಕಿಸೆಯಲ್ಲೇ ಹಣ್ಣು ತುಂಬಿಸಿಕೊಳ್ಳಲು ಕಾರಣವಿಲ್ಲದಿಲ್ಲ. ಮರವೇರಿದಾಗ ಚಡ್ಡಿಯ ಕಿಸೆಗೆ ತುಂಬಿಸಲು ತುಸು ಕಷ್ಟವಾಗುತ್ತಿತ್ತು. ಕಷ್ಟದಲ್ಲಿ ತುಂಬಿಸಿದರೂ ಮರದಿಂದ ಕೆಳಗಿಳಿಯುವಾಗ ಕಾಲಸಂಧಿಗಳು ಮಡಚುವಾಗ ಕಿಸೆಯಲ್ಲಿರುವ ಹಣ್ಣುಗಳು ಒತ್ತಿ ಅಪ್ಪಚ್ಚಿಯಾಗಿ ಬಿಡುತ್ತಿತ್ತು. ಆ ಕಾಲದಲ್ಲಿ ನಮಗೆ ಈಗಿನಂತೆ ರೆಕ್ಸಿನ್ ಸ್ಕೂಲ್ ಬ್ಯಾಗುಗಳಿರಲಿಲ್ಲ. ಒಂದೋ ತಂಗೀಸಿನ ಚೀಲ ಅಥವಾ ಬಟ್ಟೆಯ ಚೀಲ. ತಂಗೀಸಿನ ಚೀಲದಲ್ಲಿ ಕಿಸೆಗಳಿರುತ್ತಿರಲಿಲ್ಲವಾದ್ದರಿಂದ ಅದರಲ್ಲಿ ಹಣ್ಣು ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ನೇರವಾಗಿ ಪುಸ್ತಕವಿಡುವಲ್ಲಿಗೇ ತುಂಬಿಸಿದರೆ ಪುಸ್ತಕದ ತುಂಬಾ ನೇರಳೆ ರಂಗು ಮೆತ್ತಿಕೊಳ್ಳುತ್ತಿತ್ತು. ಬಟ್ಟೆ ಚೀಲಗಳಲ್ಲಿ ಕಿಸೆಗಳಿರುತ್ತಿದ್ದವು. ಅವುಗಳಲ್ಲಿ ಹಣ್ಣು ತುಂಬಿಸಿಕೊಳ್ಳುತ್ತಿದ್ದೆವು. ಬಟ್ಟೆಯ ಚೀಲವಾದರೆ ಅದರ ಹೊರಮೈಯ ತುಂಬಾ ಪೆನ್ನಿನ ಶಾಯಿ ಕಕ್ಕಿದಂತೆಯೇ ಕಾಣುತ್ತಿತ್ತು. ಆ ಕಾಲದಲ್ಲಿ ಈಗಿನಷ್ಟು ಸಲೀಸಾಗಿ ಬೇಕು ಬೇಕೆಂದಂತೆ ಪ್ಲಾಸ್ಟಿಕ್ ಕವರ್ ಸಿಗುತ್ತಿರಲಿಲ್ಲ. ಆಗ ಮನೆಯಿಂದ ಪ್ಲಾಸ್ಟಿಕ್ ಕವರನ್ನೂ ಎಗರಿಸಿ ತರಬೇಕಿತ್ತು. ಹಾಗೆ ಒಮ್ಮೆ ಒಂದು ಪ್ಲಾಸ್ಟಿಕ್ ಕವರ್ ತಂದರೆ ಅದನ್ನು ವಾರಗಳ ಕಾಲ ಜೋಪಾನವಾಗಿಡುತ್ತಿದ್ದೆವು. ತೀರಾ ಪ್ಲಾಸ್ಟಿಕ್ ಕವರ್ ಸಿಗದಿದ್ದಾಗ ಊಟದ ಬುತ್ತಿಯ ತುಂಬಾ ಕುಂಟು ನೇರಳೆ ತುಂಬಿಸಿ ತಂದು ತಿನ್ನುತ್ತಿದ್ದೆವು.

ಕುಂಟು ನೇರಳೆಯನ್ನು ಯಾರ ಗುಡ್ಡದ ಮರವೇರಿ ಕೊಯ್ದರೂ ಸಮಸ್ಯೆಯಾಗುತ್ತಿರಲಿಲ್ಲ. ಬೇರೆ ಹಣ್ಣುಗಳನ್ನು ಕೊಯ್ದರೆ ಆ ಮರದ ಮಾಲಕನ ಕೈಗೆ ಸಿಕ್ಕರೆ ಕೆಲವೊಮ್ಮೆ ಬೈಗುಳ, ಕೆಲವೊಮ್ಮೆ ಪೆಟ್ಟು ಮತ್ತೆ ಕೆಲವೊಮ್ಮೆ ನಮ್ಮ ಮನೆಗೆ ದೂರು ತಲುಪುತ್ತಿತ್ತು. ಮರದ ಮಾಲಕರ ಬೈಗುಳ ಮತ್ತು ಪೆಟ್ಟು ಇವೆಲ್ಲಾ ನಮಗೆ ದೊಡ್ಡ ಸಂಗತಿಯಾಗುತ್ತಿರಲಿಲ್ಲ. ಅವನ್ನೆಲ್ಲಾ ಕಲ್ಲಿ ವಲ್ಲಿ ಮಾಡುತ್ತಿದ್ದೆವು. ಆದರೆ ನಮ್ಮ ಮನೆಗೆ ದೂರು ತಲುಪಿದರೆ ಮಾತ್ರ ಹೆದರಿ ನಡುಗುತ್ತಿದ್ದೆವು.

ಕುಂಟು ನೇರಳೆ ಕೊಯ್ದಗ ಯಾರೂ ಅದನ್ನು ಕೇಳಲು ಬರುತ್ತಿರಲಿಲ್ಲ. ಅದನ್ನು ಯಾರೂ ಒಂದು ಬೆಲೆಯುಳ್ಳ ಹಣ್ಣೆಂದು ಪರಿಗಣಿಸುತ್ತಿರಲಿಲ್ಲ. ಯಾಕೆಂದರೆ ಅವನ್ನು ಹಳ್ಳಿಗಳಲ್ಲಿ ಯಾರೂ ಮಾರುತ್ತಿರಲಿಲ್ಲ. ಕೆಲವು ಹಣ್ಣುಗಳನ್ನು ಅತಿಯಾಗಿ ತಿಂದರೆ ಹೊಟ್ಟೆ ನೋವು ಬರುವುದಿತ್ತು.ಆದರೆ ಕುಂಟಲಹಣ್ಣು ತಿಂದು ಹೊಟ್ಟೆ ನೋವು ಬಂದಿದೆ ಎಂದು ನಾನು ಈವರೆಗೆ ಕೇಳಿಲ್ಲ. ಅದಕ್ಕೆ ಕಾರಣ ನನಗೆ ಇತ್ತೀಚಿನವರೆಗೆ ಗೊತ್ತೂ ಇರಲಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದ ಸಂಶೋಧನೆ ಮಾಡುತ್ತಿರುವ ನನ್ನ ಆತ್ಮೀಯ ಗೆಳೆಯ ಕೊಡಗಿನ ಮುಸ್ತಫಾ ಅದಕ್ಕೆ ಕಾರಣವೇನೆಂದು ತಿಳಿಸಿದಾಗ ಆಶ್ಚರ್ಯವಾಗಿತ್ತು.

ಅದೇನೆಂದರೆ ಕುಂಟಲಹಣ್ಣಿನ ಬೀಜವನ್ನು ಹುಡಿಮಾಡಿ ನೀರಲ್ಲಿ ಕಲಸಿ ಕುಡಿದರೆ ಹೊಟ್ಟೆ ನೋವು ಮಂಗ ಮಾಯವಾಗುತ್ತದಂತೆ. ಈ ಕಾಡುಹಣ್ಣಲ್ಲಿ ಔಷಧೀಯ ಗುಣವಿರುವುದೇ ಅದನ್ನು ಎಷ್ಟೇ ತಿಂದರೂ ಹೊಟ್ಟೆಯ ಸಮಸ್ಯೆ ಬಾಧಿಸದಿರಲು ಕಾರಣ.

ನಾನು ನನ್ನ ಶಾಲಾ ದಿನಗಳ ಬಹುಪಾಲು ಕಳೆದದ್ದು ಉಳ್ಳಾಲದ ಮಂಚಿಲ ಎಂಬಲ್ಲಿರುವ ನನ್ನಜ್ಜಿ ಮನೆಯಲ್ಲಿ. ಆರನೇ ತರಗತಿ ಮತ್ತು ಏಳನೇ ತರಗತಿ ಓದಿದ್ದು ನಮ್ಮ ಪಜೀರಿನ ಕಂಬಳಪದವು ಶಾಲೆಯಲ್ಲಿ ನನ್ನ ಹಳ್ಳಿ ಬದುಕಿನ ಬಾಲ್ಯದ ಅನುಭವವೇನಿದ್ದರೂ ಆ ಎರಡು ವರ್ಷಗಳದ್ದು. ನಮ್ಮ ಹಳ್ಳಿಯಲ್ಲಿ ಕೇವಲ ಮಕ್ಕಳೇ ತಿನ್ನುವ ಬೆಲೆರಹಿತ ಕಾಡುಹಣ್ಣೆಂದೇ ಪರಿಗಣಿಸುವ ಕುಂಟುನೇರಳೆಯನ್ನು ಪೇಟೆಗಳ ಶಾಲೆಯ ಗೇಟಿನ ಹೊರಗೆ ಮಾರುತ್ತಿದ್ದರು. ನಾನು ಉಳ್ಳಾಲ ತೊಕ್ಕೊಟ್ಟಿನ ಸೈಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಗೇಟಿನ ಹೊರಗಡೆ ಕಡಲೆ ಕಾಯಿ ಮಾರುವ ಮಹಿಳೆಯರು ಕುಂಟಲ ಹಣ್ಣನ್ನೂ ಮಾರುತ್ತಿದ್ದರು. ಆಗ ನಾಲ್ಕಾಣೆಗೆ ಒಂದು ಟಾನಿಕ್‌ನ ಮುಚ್ಚಳದಂತಹ ಮುಚ್ಚಳದಷ್ಟು ಮತ್ತು ಎಂಟಾಣೆಗೆ ಎರಡು ಮುಚ್ಚಳದಷ್ಟು ಸಿಗುತ್ತಿತ್ತು. ಅದನ್ನು ಕಡಲೇ ಕಾಯಿ ಕಟ್ಟುವಂತೆಯೇ ಕಟ್ಟಿ ಕೊಡುತ್ತಿದ್ದರು. ಸಾಮಾನ್ಯವಾಗಿ ಈಗಿನ ಐಸ್‌ಕ್ರೀಂ ಕೋನ್‌ನ ಆಕಾರದಲ್ಲಿ ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರು.

ಕುಂಟು ನೇರಳೆ ಎಲ್ಲೆಡೆಯೂ ಅಳಿವಿನಂಚಿಗೆ ತಲುಪಿದೆಯೆಂದಲ್ಲ. ಅನೇಕ ಹಳ್ಳಿಗಳಲ್ಲಿ ಹೆಚ್ಚು ಕಡಿಮೆ ಅಳಿವಿನಂಚಿಗೆ ತಲುಪಿದೆ.

ನಾನು ಕೆಲವೊಮ್ಮೆ ಬರೆಯಲು ಏಕಾಂತ ಬಯಸಿ ಮುಡಿಪು ಸಂತ ಜೋಸೆಫ ವಾಝರ ಚರ್ಚಿನ ಬೆಟ್ಟಕ್ಕೆ ಹೋಗುವುದಿದೆ. ಚರ್ಚಿನ ಆವರಣದ ತುಂಬಾ ಜನಜಂಗುಳಿಯಿರುತ್ತದಾದರೂ ಚರ್ಚಿನ ಕಾಂಪೌಂಡಿನ ಬಳಿ ಬೃಹತ್ ಇಳಿಜಾರು ಪ್ರದೇಶವಿದೆ. ಸಾಮಾನ್ಯವಾಗಿ ಅಲ್ಲಿಗೆ ಯಾರೂ ಹೋಗುವುದಿಲ್ಲವಾದ್ದರಿಂದ ಅಲ್ಲಿ ಶಾಂತ ವಾತಾವರಣವಿರುತ್ತದೆ. ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕೂತು ಬರೆಯುವುದೆಂದರೆ ನನಗೆ ಅತೀವ ಖುಷಿ ಸಿಗುತ್ತಿತ್ತು. ಸುಮಾರು ಐದು ವರ್ಷಗಳ ಹಿಂದೆ ಅಲ್ಲಿ ಬೇಕಾಬಿಟ್ಟಿ ಕುಂಟಲಹಣ್ಣಿನ ಮರಗಳಿದ್ದವು.ಆಗ ನಾನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿಸಿ ಕುಂಟಲಹಣ್ಣು ಮೆಲ್ಲುತ್ತಾ ಬರೆಯುತ್ತಿದ್ದೆ. ಈಗ ಅಲ್ಲಿಯೂ ಕುಂಟಲಹಣ್ಣಿನ ಮರಗಳು ವಿರಳವಾಗಿವೆ. ಯಾಕೆಂದರೆ ಅಲ್ಲಿಯ ರಮಣೀಯತೆ ಕಣ್ಮರೆಯಾಗುತ್ತಾ ಬಂದಿದೆ. ಹಿಂದೆ ಅಲ್ಲಿ ಕಣ್ಣೆಟಕುವಷ್ಟು ಇಳಿಜಾರು ಮತ್ತು ಇಳಿಜಾರಿನಾಚೆಗಿರುವ ಸಮತಟ್ಟು ಪ್ರದೇಶದಲ್ಲಿ ಹಸಿರು ಹೊದ್ದ ಗದ್ದೆ ತೋಟಗಳಿತ್ತು. ಈಗ ಅಲ್ಲೆಲ್ಲಾ ಕಾಂಕ್ರಿಟ್ ಕಾಡು ತಲೆಯಿತ್ತುತ್ತಿವೆ.

ಈಗ ಕುಂಟಲ ಹಣ್ಣು ಸಿಗುವ ಗುಡ್ಡಗಳಿದ್ದರೂ ಹಿಂದಿನ ಮಕ್ಕಳಂತೆ ಈಗಿನ ಮಕ್ಕಳು ಚಾರಣಕ್ಕೆ ಹೋಗುವುದಿಲ್ಲ. ಈಗ ಚಾರಣ ಒಂದು ಫ್ಯಾಷನ್ ಆಗಿ ಎಲ್ಲೋ, ಚಾರ್ಮಾಡಿ, ಆಗುಂಬೆಗೆ ಚಾರಣ ಹೊರಡುತ್ತಾರಾದರೂ ನಮ್ಮ ನಮ್ಮ ಪರಿಸರದ ಗುಡ್ಡ ಕಾಡುಗಳಿಗೆ ಚಾರಣ ಹೋಗುವವರಿಲ್ಲ.

ಈಗಿನ ಹೆತ್ತವರು ಹಿಂದೆ ಅವೇ ಕುಂಟಲಹಣ್ಣು ತಿಂದು ಬೆಳೆದವರಾದರೂ ಅವರ ಮಕ್ಕಳು ಅವನ್ನು ತಿನ್ನ ಹೋದರೆ ಛೀ ಗಲೀಜು ಎಂದೋ ವಿಷದ ಕಾಯಿಯೆಂದೋ ಹೆದರಿಸಿ ಮಕ್ಕಳನ್ನು ಕುಂಟಲ ಹಣ್ಣಿನ ಸವಿಯಿಂದ ವಂಚಿಸುತ್ತಿದ್ದಾರೆ.

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News