ಖಾವುಗಲ್ಲಿಯ ಪಕ್ಷಿನೋಟ

Update: 2019-06-16 13:52 GMT

 ಟ್‌ಕೋಪರ್ ಖಾವುಗಲ್ಲಿಯೆಂದೇ ಖ್ಯಾತವಾದ, ಎನ್‌ಡಿಟಿವಿ ಫುಡ್ ಟೈಮ್ಸ್‌ನಲ್ಲೂ ಜಗಜ್ಜಾಹೀರಾದ ನಮ್ಮ ರಸ್ತೆಯ ವಸತಿ ಕಟ್ಟಡದ ನಾಲ್ಕನೇ ಮಹಡಿಯ ನಮ್ಮ ಮನೆ ಕೊಳ್ಳಲೆಂದು ಕೆಲವರ್ಷಗಳ ಕೆಳಗೆ ಪಾರ್ಟಿಯೊಂದು ಬಂದಿತ್ತು. ಇಬ್ಬರು ಗಂಡಸರು, ಮತ್ತೊಬ್ಬ ಹೆಂಗಸು. ಸ್ಥೂಲಕಾಯದ ಗುಜರಾತಿಗಳು. ನಮ್ಮ ಹೊರತು, ಇಲ್ಲಿರುವವರೆಲ್ಲ ಗುಜರಾತಿಗಳು; ಹಾಗೂ ಅವರ ದೃಷ್ಟಿಯಲ್ಲಿ ನಾವು ಮದರಾಸಿಗಳು! ಮನೆ, ಮನೆಗಿಂತ ಹೆಚ್ಚಾಗಿ ಇಲ್ಲಿ ಬೀಸಿ ಬರುವ ಗಾಳಿ ಅವರಿಗೆ ತುಂಬ ಹಿಡಿಸಿತ್ತು. ಕ್ಯಾ ಹವಾ ಹೇ! ಕ್ಯಾ ಹವಾ ಹೇ! ಎಂದು ಅವರು ಮೆಚ್ಚಿದ್ದೇ ಮೆಚ್ಚಿದ್ದು ! ಚಹಾ ಬೇಡವೆಂದುದರಿಂದ ಗಾಜಿನ ದೊಡ್ಡ ಲೋಟಗಳಲ್ಲಿ ನೀರು ತುಂಬಿ, ಟ್ರೇಯಲ್ಲಿಟ್ಟು, ಅವರ ಬಳಿಗೊಯ್ದರೆ, ಅವರು ಲೋಟಕ್ಕೆ ಕೈ ಚಾಚುವ ಮೊದಲೇ, ಪಶ್ಚಿಮದಿಂದ ಬೀಸಿ ಬಂದ ಗಾಳಿಗೆ , ಲೋಟ ಟ್ರೇಯಲ್ಲಿ ಮಗುಚಿ ಕೊಂಡಿತು. ಎರಡನೇ ಬಾರಿ ನೀರು ತಂದಾಗಲೂ ಹೀಗೆ ಆದಾಗ, ಜೊತೆಗಿದ್ದ ನನ್ನ ಮೈದುನ, ಏನಕ್ಕ, ಇದು? ಬಿಡಿ, ನಾನು ತರ್ತೇನೆ, ಎಂದು ತಾನೇ ಟ್ರೇ ಒಯ್ದ. ಅವರ ಬಳಿ ಸಾರುತ್ತಿದ್ದಂತೆ, ಪುನಃ ಮೂರನೇ ಬಾರಿಗೆ ಲೋಟ ಮಗುಚಿ ಕೊಂಡಿತು. ! ಐಸೀ ಹವಾ ಹಮ್‌ನೇ ಕಹೀಂ ನಹೀಂ ದೇಖಾ!, ಎಂದು ಅಪ್ರತಿಭರಾಗಿ ನಗುತ್ತಾ ಅವರು ಹೊರಟು ಹೋದರು. ಇಲ್ಲಿ ಭೂತದ ಕಾಟವಿದೆ, ಎಂದಂದು ಕೊಂಡರೋ, ಏನೋ, ಆ ಮೇಲೆ ಅವರು ಇತ್ತ ಸುಳಿಯಲಿಲ್ಲ. ಇದು ಹಳೆಯ ಕತೆ. ಈಗ ಈ ಮನೆಯನ್ನು ಬಿಟ್ಟು ಅಮರಾವತಿಗೆ ಹೋಗಿ ಎಂದರೂ ನಾವು ಹೋಗೆವು. ಅಷ್ಟು ಪ್ರಿಯವೂ, ಅನುಕೂಲಕರವೂ ಆಗಿದೆ, ಈ ತಾಣ. ನಾವೀ ಘಾಟ್‌ಕೋಪರ್‌ಗೆ ಬಂದಾಗ, ನಮ್ಮ ಮನೆಯಿಂದ ದೂರ ಪೂರ್ವದಲ್ಲಿ ಥಾನಾ ಕ್ರೀಕ್ ಬ್ರಿಜ್‌ನ ಸಾಲು ದೀಪಗಳು, ದಕ್ಷಿಣದಲ್ಲಿ ಟ್ರಾಂಬೆ ಹಿಲ್, ಪಶ್ಚಿಮದಲ್ಲಿ ಏರ್‌ಪೋರ್ಟ್‌ಗಿಳಿವ ವಿಮಾನಗಳು, ಉತ್ತರದಲ್ಲಿ ಅಸಲ್ಫಾ ಬೆಟ್ಟಗಳು ಸ್ಪಷ್ಟವಾಗಿ ಕಾಣುತ್ತಿದ್ದುವು. ಈಗ ಇವೊಂದೂ ಕಾಣಿಸದಂತೆ ಎಲ್ಲೆಲ್ಲೂ ಬಹುಮಹಡಿ ಕಟ್ಟಡಗಳೆದ್ದಿವೆ. ವಸತಿ ಸಂಕೀರ್ಣಗಳು; ಮಾಲ್‌ಗಳು; ಇಂಟರ್‌ನ್ಯಾಶನಲ್ ಸ್ಕೂಲ್‌ಗಳು ತಲೆಯೆತ್ತಿವೆ. ಒಂದೆರಡು ಅತಿ ಶಿಥಿಲ, ಯಾವ ಕ್ಷಣವೂ ಬಿದ್ದು ಬಡಬಹುದಾದಂಥ ಹವೇಲಿಗಳು ಇನ್ನೂ ನಿಂತಿವೆ. ಹೀಗೆ ವಿಕಸಿಸುತ್ತಿರುವ ಈ ಕಟ್ಟಡಗಳ ಕಾಡಿನಲ್ಲಿ ವೃಕ್ಷ ಸಂಪತ್ತಿಗೂ ಕೊರತೆಯಿರದಿರುವುದೇ ನಾವಿಲ್ಲಿಂದ ಅನ್ಯತ್ರ ತೆರಳ ಬಯಸದಿರಲು ಮುಖ್ಯ ಕಾರಣ. ಈ ವೃಕ್ಷ ಸಂಪತ್ತಿನಿಂದಾಗಿ ಎಣೆಯಿರದ ಪಕ್ಷಿಸಂಕುಲ; ಸದಾ ಕಿಲಿ ಕಿಲಿ ಎನ್ನುವ ಅಸಂಖ್ಯ ಗಿಳಿಗಳು, ಗುಂಪು ಗುಂಪಾಗಿ ಹಸಿರಿನ ಹಚ್ಚಡವೇ ಹಾರಿದಂತೆ, ಹೊರಗೆ ನಮ್ಮ ಕಟ್ಟಡಕ್ಕೆ ಸುತ್ತು ಬರುವ ಪರಿಯೋ! ಅವುಗಳ ಆವಾಸವಾದ ನಮ್ಮೆದುರಿನ ವಿಶಾಲ ಅಶ್ವತ್ಥ ವೃಕ್ಷಕ್ಕೆ, ಕೆಲ ದಿನಗಳ ಕಾಲ ಎಲ್ಲಿಂದಲೋ ಹಾರಿ ಬಂದು ನೇತು ಬೀಳುವ ಅಸಂಖ್ಯ ಬಾವಲಿಗಳೋ! ಮತ್ತೆ ಮುಸ್ಸಂಜೆಯಲ್ಲಿ ಅವುಗಳ ಚೀತ್ಕಾರವೋ! ಮೋಹಕ ನೀಲವರ್ಣದ ಮಿಂಚುಳ್ಳಿಗಳು ಮತ್ತು ಹೊನ್ನವರ್ಣದಿಂದ ಸೆಳೆವ ಗೋಲ್ಡನ್ ಒರಿಯೋಲ್‌ಗಳು! ಅಳಿಲು, ಇಲಿ, ಪಾರಿವಾಳಗಳಂತೂ ಇಲ್ಲಿ ಸದಾ ವರ್ಧಿಸುವಂಥವು. ಖಾವುಗಲ್ಲಿಯೇ ಆಗಿರುವ ನಮ್ಮ ರಸ್ತೆಯ ತಿಂಡಿಗಳ ಸಮೃದ್ಧಿಯೋ, ಈ ಗುಜರಾತಿಗಳು ಬೆಳ್ಳಂಬೆಳಗ್ಗೆ ಮನೆಯ ಹೊರಗೆ ಕಾಗೆ, ಗುಬ್ಬಿ, ಗಿಳಿ, ಪಾರಿವಾಳಗಳಿಗೆ ಎರಚುವ ಹಿಡಿಹಿಡಿಗಟ್ಟಲೆ ಗೋಧಿ, ಜೋಳ, ಬಾಜ್ರಾಗಳ ಸಮೃದ್ಧಿಯೋ, ಲೋಕದ ಎಲ್ಲ ಕಾಗೆ, ಗಿಳಿ, ಪಾರಿವಾಳಗಳು, ಅಳಿಲುಗಳು, ಗಿಡುಗ, ಮೈನಾಗಳು ಇಲ್ಲೇ ಬೀಡುಬಿಟ್ಟಿವೆಯೇನೋ ಎಂದು ಅನಿಸುವಂತಿರುತ್ತದೆ. ಮರಗಳಲ್ಲಿ ಈ ಗಿಳಿ, ಮೈನಾ, ಮಿಂಚುಳ್ಳಿ, ಸುವರ್ಣಪಕ್ಷಿ, ಗ್ರೀನ್ ಬಾರ್ಬೆಟ್‌ಗಳನ್ನು ಕಾಣುವುದು ಎಷ್ಟು ಸೊಗಸು ! ಆದರೆ ನನ್ನ ಬಾಲ್ಕನಿ ತೋಟದ ಹೂಗಳೊಂದನ್ನೂ ಅರಳಲು ಬಿಡದೆ, ಗಿಡಗಳನ್ನೂ ಕಚಕಚನೆ ಜಗಿದು ಕತ್ತರಿಸುವ ಈ ಮಹಾವಿಧ್ವಂಸಕ ಅಳಿಲುಗಳೊಡನೆ ಮಾತ್ರ ನನ್ನ ಹೋರಾಟ ನಡೆದೇ ಇದೆ. ವಣಿಕ ಸಮಾಜದ ಬಾಹುಳ್ಯವಿರುವ ಈ ಉಪನಗರದಲ್ಲಿ ದಿನ ಬೆಳಗಾದರೆ ಅಂಗಡಿಗಳು ಬದಲಾಗುತ್ತಿರುತ್ತವೆ. ವೈಭವೋಪೇತವಾಗಿ ತೆರೆದು ಕೊಂಡ ಬಟ್ಟೆಯಂಗಡಿಯೊಂದು ಒಂದಿನ ಕಾಫೀ ಡೇ ಆಗಿ ಮಾರ್ಪಟ್ಟಿರುತ್ತದೆ. ಒಳ್ಳೆಯ ಟೇಲರ್ ಇದ್ದಾನೆಂದು ಯಾರನ್ನಾದರೂ ಕರೆದೊಯ್ದಿರೋ, ಅಲ್ಲಿ ತಲುಪಿ ನೋಡಿದರೆ, ಅದು ಹಣ್ಣು ಹಂಪಲು ಮಾರುವ ಅಂಗಡಿಯಾಗಿರುತ್ತದೆ. ಮಕ್ಕಳ ಉಡುಪಿನ ಮಳಿಗೆ ಎಂದು ಹೋದರೆ, ಅದು ಟೈಟನ್ ವಾಚ್‌ನ ಶೋ ರೂಮ್ ಆಗಿರುತ್ತದೆ. ಚಿನ್ನಾಭರಣದಂಗಡಿಗಳು ಮಾತ್ರ ಇಲ್ಲಿ ಮಾರ್ಪಡುವುದಿಲ್ಲ. ಬದಲಿಗೆ, ಇತರ ಅಂಗಡಿಗಳು ಚಿನ್ನಾಭರಣಗಳ ಅಂಗಡಿಯಾಗಿ ಮಾರ್ಪಟ್ಟಿರುತ್ತವೆ. ನಮ್ಮೂರಲ್ಲಿ ಅಪರೂಪವಾಗಿರುವ ನಾಗಸಂಪಿಗೆ ಮರಗಳು ಇಲ್ಲಿ ರಸ್ತೆಯುದ್ದಕ್ಕೂ ಹುಲುಸಾಗಿ ಬೆಳೆದು, ಪರಮಕಂಪಿನ ಹೂಗಳನ್ನೂ, ಕಾಂಡ ತುಂಬ ಫಿರಂಗಿಗುಂಡಿನಂತಹ ಕಾಯಿಗಳನ್ನೂ ಹೊತ್ತಿರುತ್ತವೆ. ಅತ್ತಿ ಮರಗಳು, ಅಶ್ವತ್ಥ ಮರಗಳೂ ಹೇರಳ! ಅಲ್ಲಲ್ಲಿ ಜೈನ ಮಂದಿರಗಳೂ, ಇತರ ಗುಡಿಗಳೂ ಹುಟ್ಟಿಕೊಳ್ಳುತ್ತವೆ. ಆಬಾಲ ವೃದ್ಧರಿಗಾಗಿ ಪಾರ್ಕ್‌ಗಳೂ ಬೇಕಾದಷ್ಟಿವೆ. ನಮ್ಮ ಈ ಖಾವುಗಲ್ಲಿ, ಬಾಜಿಗಲ್ಲಿಗಳ ಚಿತ್ರವೂ ಬದಲಾಗುವುದೆಂದಿಲ್ಲ. ಶೇವ್‌ಪುರಿ, ಪಾನಿಪುರಿ, ದಹಿಪುರಿ, ರಗ್ಡಾ ಪ್ಯಾಟಿಸ್, ಸ್ಯಾಂಡ್‌ವಿಚ್, ದಾಬೇಲಿ , ವಿವಿಧ ಬಗೆಯ ದೋಸೆಗಳು, ಗೋಲಾ, ಕುಲ್ಫಿ ಗಾಡಿಗಳು, ಎಂತಹ ವಾಹನ ದಟ್ಟಣೆಯಲ್ಲೂ ನಮ್ಮ ಕೆಳಗಿನ ರಸ್ತೆಯಲ್ಲಿ ಅವತರಿಸಿಯೇ ಸಿದ್ಧ್ಧ. ಅವಕ್ಕೆ ಮುಗಿ ಬೀಳುವ ಈ ತಿನಿಸು ಪ್ರಿಯ ಜನರೂ ಅಷ್ಟೇ. ಮಳೆ, ಚಳಿ, ಸೆಖೆ ಯಾವುದೂ ಅವರನ್ನು ಈ ರಸ್ತೆಬದಿ ಖಾದ್ಯಗಳಿಂದ ವಿಮುಖರಾಗಿಸುವುದಿಲ್ಲ. ಬಹುಶಃ ಅವರ ಜಿಹ್ವೆಯಷ್ಟು ಮೂಗು ಚುರುಕಲ್ಲವೇನೋ ಎಂಬ ಸಂಶಯ ನನ್ನನ್ನು ಕಾಡುವುದಿದೆ. ವಿವಿಧ ಖಾದ್ಯಗಳ, ಹಸಿ ಚಟ್ನಿಗಳ, ಸಂಬಾರಗಳ ಮಿಶ್ರ ವಾಸನೆ, ಪಕ್ಕದಲ್ಲೇ ಕಸ, ಕಶ್ಮಲ, ತ್ಯಾಜ್ಯಗಳ ವಾಸನೆ, ಎಂಜಲು ತಟ್ಟೆಗಳನ್ನು ತೊಳೆವ ಬಾಲ್ದಿನೀರಿನ ವಾಸನೆ, ಅಷ್ಟೆಲ್ಲ ತಿನ್ನುವ ಬಾಯಿಗಳ ನಡುವೆ, ತಮಗೂ ಏನಾದರೂ ಸಿಗುವುದೇನೋ ಎಂದು ನುಸುಳುವ ಬೀದಿನಾಯಿಗಳ ವಾಸನೆ ಎಲ್ಲ ಒಂದಾಗಿ ಅತ್ತಣಿಂದ ಸಾಗುವಾಗ ಹೊಟ್ಟೆ ತೊಳಸಿದಂತೆ ಆಗುವುದೂ ಇದೆ. ಮುನಿಸಿಪಾಲಿಟಿ ಗಾಡಿ ರೇಡ್‌ಗೆ ಬಂದಾಗ ಉರುಳುಗಾಲಿಗಳ ಓಟದ ಧಡಭಡ ಸದ್ದು, ಉಳಿಸಲಾದ ಮಾಲಿನೊಡನೆ ಜೀವಬಿಟ್ಟೋಡುವ ಬಾಗೋ, ಬಾಗೋ ಎಂಬ ಕೂಗು ಇಲ್ಲಿನ ಶಾಶ್ವತ ಚಿತ್ರ! ನೋಡುಗರ ಮರುಕ ವ್ಯರ್ಥವೆಂಬಂತೆ, ಮರುದಿನವೇ ಖಾವುಗಲ್ಲಿ ಯಥಾಸ್ಥಿತಿ ಪುನರವತರಿಸುವುದು ಇಲ್ಲಿನ ಚಿದಂಬರ ರಹಸ್ಯ!

 ಒಂದಿನ ನನ್ನ ಮನೆಗೆಲಸದ ಸಹಾಯಕಿ ಹುಡುಗಿ ರೂಪಾಲಿ, ಒಳ ಬರುತ್ತಾ, ನಗುವಿನಿಂದ ಅರಳಿದ ಮುಖದಿಂದ, ಅಮ್ಮಾ, ಹರ್ಷ್ ಭಯ್ಯಾ ಚಿಮ್‌ಣಿ ಲೇಕೇ ಆಯೇ, ಎಂದಳು. ನನಗೆ ಅಚ್ಚರಿಯಾಯ್ತು. ಹರ್ಷನಿಗೆ ಚಿಮಣಿ ಏಕೆ ಬೇಕಾಯ್ತು? ಏನು ಮಾಡಲಿದ್ದಾನೆ, ಚಿಮಣಿಗೆ ಚಿಮಣಿ ಎಣ್ಣೆ ಎಲ್ಲಿ, ಎಂದೆಲ್ಲ ನಾನು ಯೋಚಿಸುತ್ತಿರುವಾಗ, ಹರ್ಷ, ಗುಬ್ಬಿಮರಿಯೊಂದನ್ನು ಅಂಗೈಗಳಲ್ಲಿರಿಸಿ, ಒಳ ಬಂದ. ಓ, ಇದು ಹಿಂದೀ ಚಿಮಣಿ, ಎಂದು ನನಗೆ ಜ್ಞಾನೋದಯವಾಯ್ತು. ಮೊದಲ ಮಾಳಿಗೆಯ ಪ್ಯಾಸೇಜ್‌ನಲ್ಲಿ ಮೇಲೆ ಟ್ಯೂಬ್ ಲೈಟ್‌ನ ಎಡೆಯಲ್ಲಿ ಕಟ್ಟಿದ್ದ ಗೂಡಿನಿಂದ ಗುಬ್ಬಿ ಮರಿ ಕೆಳಗೆ ಬಿದ್ದು ಬಿಟ್ಟಿತ್ತು. ಹರ್ಷ ಮನೆಯೊಳಗೆ ತಂದ ಗುಬ್ಬಿ ಮರಿ, ಒಂದು ವಾರ ನಮ್ಮಿಡನೆ ಇತ್ತು. ಒಳಗಿನ ಕೋಣೆಯ ಬಾಲ್ಕನಿಯಲ್ಲಿ ತೆರೆದ ಕಾರ್ಡ್‌ಬೋರ್ಡ್ ಪೆಟ್ಟಿಗೆಯಲ್ಲಿ ನಾನದನ್ನು ಇರಿಸಿದೆ. ತಿನ್ನಲು ಅನ್ನ, ಅಕ್ಕಿ, ತಟ್ಟೆಯಲ್ಲಿ ಕುಡಿಯಲು ಹಾಲು, ನೀರು ಇಡುತ್ತಿದ್ದೆ. ಮರಿ, ಪೆಟ್ಟಿಗೆಯಿಂದ ಹೊರ ಬಂದು ಅಲ್ಪ, ಸ್ವಲ್ಪ ತಿಂದು, ಕುಡಿದು , ಪುನಃ ಮರಳಿ ಹಿಂದೆ ಪೆಟ್ಟಿಗೆಯೊಳಗೆ ಹೋಗುತ್ತಿತ್ತು. ಎರಡು ದಿನಗಳ ಬಳಿಕ, ದೊಡ್ಡ ಗುಬ್ಬಿಯೊಂದು - ಮರಿಯ ಅಮ್ಮನೋ, ಅಪ್ಪನೋ ಇರಬೇಕು - ಬಾಲ್ಕನಿ ಗ್ರಿಲ್‌ನ ಮೇಲೆ ಬಂದು ಕುಳಿತು ಚಿಂವ್ ಚಿಂವ್ ಎನ್ನುತ್ತಾ ಮರಿಯನ್ನು ಕರೆಯುತ್ತಿತ್ತು. ಮಾರನೆ ದಿನ ಅದರ ಜೊತೆಗೆ ಇನ್ನೊಂದು ಗುಬ್ಬಿಯೂ ಇತ್ತು. ಎರಡೂ ಜೋರಾಗಿ ಚಿಂವ್ ಚಿಂವ್ ನಡೆಸಿತು. ಮೂರನೇ ದಿನ ಗುಬ್ಬಿಯು ಒಳಗಿಳಿದು, ಮರಿಯ ಸುತ್ತು ಕುಪ್ಪಳಿಸ ತೊಡಗಿತು. ಮರುದಿನ ಮರಿಯೂ ಚಟುವಟಿಕೆಯಿಂದ ಅತ್ತಿತ್ತ ಹೆಜ್ಜೆ ಹಾಕ ತೊಡಗಿತು. ಇದಾಗಿ ಮೂರನೇ ದಿನ, ಬೆಳಗೆದ್ದು ನೋಡುವಾಗ ಪುಟ್ಟ ಮರಿ ಬಾಲ್ಕನಿಯಿಂದ ಮಾಯವಾಗಿ ಬಿಟ್ಟಿತ್ತು . ಬೆಕ್ಕೋ, ಬೇರೇನೋ ಹೊರಗಿನಿಂದ ಬಂದು ತಿಂದಿತೋ ಏನೆಂದು ನನಗೆ ಗಾಬರಿ, ವ್ಯಥೆಯಾಯ್ತು. ಆದರೆ ಅಲ್ಲೆಲ್ಲೂ ಯಾವುದೇ ಅವಶೇಷದ ಪತ್ತೆಯಿರಲಿಲ್ಲ. ತಾಯಿ ಗುಬ್ಬಿ, ಬಂದು ಬಂದು , ಹಾರಲು ಕಲಿಸಿ, ಕೊನೆಗೂ ಚಿಮಣಿಯನ್ನು ಹಾರಿಸಿ ಕೊಂಡು ಹೋದುದೇ ಖಂಡಿತ, ಎಂದುಕೊಂಡು ಸಮಾಧಾನ ಮಾಡಿಕೊಂಡೆ. ನಮ್ಮ ಕರ್ನಾಟಕದಲ್ಲಿ ಗುಬ್ಬಿಗಳಿಲ್ಲ ಎಂಬ ಸೊಲ್ಲು ಕೇಳಿ ಬರುವಾಗ, ಬನ್ನಿ, ಇಲ್ಲಿ ಬನ್ನಿ, ನಮ್ಮ ಈ ಕಟ್ಟಡದ ಕಾಡಿನಲ್ಲೂ ಇರುವ ವೃಕ್ಷ, ಪಕ್ಷಿ ಸಮೃದ್ಧಿಯನ್ನು ನೋಡಿ; ಬೇಕಿದ್ದರೆ, ನನ್ನ ಅಳಿಲು, ಪಾರಿವಾಳಗಳನ್ನು ಕೊಂಡು ಹೋಗಿ, ಎಂದೆನ್ನ ಬೇಕೆನಿಸುತ್ತದೆ. ಗುಲಾಬಿ, ಚೆಂಡು ಹೂ, ಸೇವಂತಿಗೆ, ದಾಸವಾಳ ಎಲ್ಲವನ್ನೂ ವಿಧ್ವಂಸ ಗೊಳಿಸುವ ಅಳಿಲುಗಳು, ನಾಜೂಕು ಸಂಜೆ ಮಲ್ಲಿಗೆಯನ್ನಾದರೂ ಮುಟ್ಟದೆ ಉಳಿಸಿಯಾವು, ಎಂದುಕೊಂಡು, ಈ ಸಲ ಊರಿಂದ ಬರುವಾಗ ಸಂಜೆಮಲ್ಲಿಗೆ ಬೀಜ ತಂದು, ಬಿತ್ತಿ, ಬೆಳೆಸಿದ್ದೆ. ಸೊಂಪಾದ ಹಳದಿ ಹಾಗೂ ಕಡುಗುಲಾಬಿ ಬಣ್ಣದ ಮೊಗ್ಗುಗಳು ಮೂಡಿದಾಗ ಹೃದಯವರಳಿತು. ಆದರೆ ಅರಳಲು ಸಿದ್ಧವಾದ ಮೊಗ್ಗುಗಳನ್ನು ಸಂಜೆ ಸಂಭ್ರಮದಿಂದ ವೀಕ್ಷಿಸಿದರೆ, ಮೊಗ್ಗೆಲ್ಲ ಶಿರಚ್ಛೇದ ಮಾಡಿಸಿಕೊಂಡಂತೆ ಕಡಿಯಲ್ಪಟ್ಟು, ಅದರೊಳಗಿನ ಮಧುವನ್ನು ಹೀರಿದಂತೆ, ಕೇಸರವೊಂದು ಮಾತ್ರ ಹೊರ ಚಾಚಲ್ಪಟ್ಟು ನನ್ನನ್ನು ಅಣಕಿಸುವಂತಿತ್ತು. ಹೃದಯ ಉಬ್ಬಿದಂತೇ ಠುಸ್ಸೆಂದು ಕುಸಿಯಿತು. ಸೊಂಪಾಗಿ ಹೂಗಳರಳಿ ಮುಸ್ಸಂಜೆಯಲ್ಲಿ ಮಾದಕ ಪರಿಮಳ ಬೀರುತ್ತಿದ್ದ ರಾತ್ರಿರಾಣಿಯ ಗಿಡ, ಕಾಂಡದ ವರೆಗೂ ಎಲ್ಲ ಗೆಲ್ಲು, ಹೂ, ಎಲೆಗಳು ಕಚಕಚನೆ ಕತ್ತರಿಸಲ್ಪಟ್ಟು, ಕುಂಡದಲ್ಲಿ ಹಸಿರು ಹಾಸಿನ ಶಯ್ಯೆ ಏರ್ಪಡಿಸಿದಂತಿತ್ತು. ನನ್ನ ಹೂಗಿಡಗಳನ್ನು ಹೇಗಾದರೂ ಈ ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲಿ? ಯಾರಾದರೂ ಹೇಳ ಬಹುದೇ?

ಮೊನ್ನೆ ಒಂದು ಬೆಳಗು ನಮ್ಮೆದುರು ತುಸು ದೂರದ ಮರದಲ್ಲಿ ಅಸಾಧ್ಯ ಗಿಳಿಗಳ ಕಲರವ. ಏನಾಯ್ತಪ್ಪಾ, ತೆಂಗಿನ ಮರದಲ್ಲಿ ಬೀಡುಬಿಟ್ಟ ಗಿಡುಗ ಎಲ್ಲಾದರೂ ಗಿಳಿಯ ಬೆನ್ನಟ್ಟಿದೆಯೇ ಎಂದು ಕಳವಳವಾಯ್ತು. ಬಹಳ ಹೊತ್ತಿನ ಬಳಿಕ ಆ ಕಲರವ ನಿಂತಿತು. ಮತ್ತರ್ಧ ಗಂಟೆಯಲ್ಲಿ ನಾನು ಬಾಲ್ಕನಿಯಲ್ಲಿ ನನ್ನ ಕಾಫಿ ಹಾಗೂ ಪತ್ರಿಕೆಗಳಲ್ಲಿ ಮುಳುಗಿದ್ದಾಗ, ನನ್ನೆದುರಿನ ಮರದಲ್ಲೇ ಕಾಗೆಗಳ ಬಿಡದ ಅರಚಾಟ ಕೇಳತೊಡಗಿತು. ಆಗಿನ ದಾಳಿಯಲ್ಲಿ ಗಾಯಗೊಂಡ ಯಾವುದಾದರೂ ಗಿಳಿಯ ಮೇಲೆ ಈ ಕಾಗೆಗಳು ದಾಳಿ ನಡೆಸಿವೆಯೇನೋ ಎಂದು ನೋಡಲು ತಲೆಯೆತ್ತಿದರೆ, ನನ್ನ ಕಣ್ಣನ್ನು ನಾನೇ ನಂಬದಾದೆ. ನನ್ನೆದುರಿನ ಗೆಲ್ಲಿನಲ್ಲೇ ಕುಳಿತು, ಅರಚುತ್ತಿದ್ದ ಕಾಗೆಗಳತ್ತ ನೋಡುತ್ತಿತ್ತು, ದೊಡ್ಡದೊಂದು ಚೆಲುವಾದ ಮಂಗ! ಪ್ರಥಮ ಬಾರಿಗೆ ಇಲ್ಲಿ ಕಾಣಿಸಿಕೊಂಡ ಈ ಹೊಸ ಅತಿಥಿಯ ದರ್ಶನದಿಂದ ನಾನು ಬೆಚ್ಚಿ ಬಿದ್ದೆ. ಬಯಸದೆ ದೊರಕಿದ ಈ ದೃಶ್ಯಭಾಗ್ಯವನ್ನು ನನ್ನ ಕ್ಯಾಮರಾದಲ್ಲಿ ಸೆರೆಯಾಗಿಸಲು ಕ್ಯಾಮರಾ ಕೈಗೆತ್ತಿಕೊಂಡು ಒಮ್ಮೆ ಕ್ಲಿಕ್ಕಿಸಿದಾಗ ಆ ಆಗಂತುಕ ನನ್ನತ್ತ ತಿರುಗಿದ. ಆತ ನೆಗೆದು ನನ್ನ ಕ್ಯಾಮರಾ ಕಿತ್ತುಕೊಳ್ಳ ಬಹುದು,

ಮನೆಯೊಳಗೇ ಬರಬಹುದು ಎಂದು ಜ್ಞಾನೋದಯವಾಗಿ ಬೇಗನೇ ಬಾಲ್ಕನಿ ಗಾಜುಗಳನ್ನು ಮುಚ್ಚತೊಡಗಿದೆ. ಈ ನಾಲ್ಕು ಮಾಳಿಗೆಯೆತ್ತರದ ನನ್ನಂತರಿಕ್ಷದಲ್ಲಿ ನನ್ನೆದುರೇ ಪ್ರತ್ಯಕ್ಷನಾದ ಈ ಹನುಮನ ಒಳ್ಳೆಯ ಪೋಟೋಗಳನ್ನು ಸೆರೆ ಹಿಡಿವ ಅವಕಾಶವನ್ನು ಕಳಕೊಂಡೆನಲ್ಲಾ ಎಂದು ಮತ್ತೆ ವ್ಯಥೆಯೆನಿಸಿತು. ಕಿಟಿಕಿ ಮುಚ್ಚಿದ್ದು ಅಪಚಾರವಾಯ್ತೆಂಬಂತೆ ಆತ ಹೊರಟುಹೋದ. ಪಶ್ಚಿಮದ ಮತ್ತಿತರ ಮರಗಳನ್ನು ಲಂಘಿಸುತ್ತಾ, ಹೋದಲ್ಲೆಲ್ಲ ಹಕ್ಕಿಗಳ ಕಲರವವೆಬ್ಬಿಸುತ್ತಾ ಅನಿತರಲ್ಲೇ ಅಂತರ್ಧಾನನಾದ.

Writer - ಶ್ಯಾಮಲಾ ಮಾಧವ

contributor

Editor - ಶ್ಯಾಮಲಾ ಮಾಧವ

contributor

Similar News