ಕ್ಲಬ್‌ಗೆ ಪೊಲೀಸರ ದಾಳಿ: ಹುಟ್ಟುಹಬ್ಬದ ಪಾರ್ಟಿ ನಡೆಸುತ್ತಿದ್ದ ರೌಡಿ ಕುಣಿಗಲ್ ಗಿರಿ ಪರಾರಿ

Update: 2019-06-15 17:51 GMT

ಬೆಂಗಳೂರು, ಜೂ. 15: ನಗರದ ರೆಸೆಡೆನ್ಸಿ ರಸ್ತೆಯ ಕ್ಲಬ್‌ನಲ್ಲಿ ಅದ್ಧೂರಿ ಹುಟ್ಟುಹಬ್ಬದ ಪಾರ್ಟಿ ನಡೆಸುತ್ತಿದ್ದ ನಟೋರಿಯಸ್ ರೌಡಿ ಕುಣಿಗಲ್ ಗಿರಿ ಸಿಸಿಬಿ ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ.

ಸಿಸಿಬಿ ಪೊಲೀಸರ ದಾಳಿ ಮಾಡಿರುವುದರ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಿಲ್ಡಿಂಗ್‌ನ ಐದನೆ ಮಹಡಿಯಲ್ಲಿನ ಬಟರ್ ಫ್ಲೈ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಗಿರಿ, ಪೊಲೀಸರು ಒಂದನೇ ಮಹಡಿಗೆ ಬರುವ ವೇಳೆ ಐದನೆ ಮಹಡಿಯಿಂದ ಮೂರನೇ ಮಹಡಿಗೆ ಪ್ಯಾಸೇಜ್‌ನಿಂದ ಬಂದು, ಕಟ್ಟಡ ಜಿಗಿದು ಪರಾರಿಯಾಗಿದ್ದಾನೆ.

ಟೈಮ್ಸ್ ಬಿಲ್ಡಿಂಗ್‌ನ ರಾಸ್ ಬಿಗ್ ಬಾಸ್, ಟೈಮ್ಸ್ ಪ್ಯಾರಿಸ್, ಟೈಮ್ಸ್ ಬಾಲಿವುಡ್ ಹಾಗೂ ಬಟರ್ ಫ್ಲೈ ಸೇರಿ 5 ಪಬ್‌ಗಳಲ್ಲಿ ಡ್ಯಾನ್ಸ್ ಗರ್ಲ್ಸ್‌ಗಳನ್ನು ಇಟ್ಟುಕೊಂಡು ಪಾರ್ಟಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ನಿನ್ನೆ ಮಧ್ಯರಾತ್ರಿ 12ರ ವೇಳೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ರಾಸ್ ಪಬ್‌ನಲ್ಲಿ ಕುಣಿಗಲ್ ಗಿರಿಗೆ ಹುಟ್ಟುಹಬ್ಬದ ಶುಭಾಶಯಗಳು ಎನ್ನುವ ಬೋರ್ಡ್ ನೋಡಿದ್ದೇ ತಡ, ಸಿಸಿಬಿಯ ಡಿಸಿಪಿಯ ಗಿರೀಶ್ ಅವರು ಎಲ್ಲಾ ಪಬ್‌ಗಳ ಮೇಲೂ ದಾಳಿ ನಡೆಸುವಂತೆ, ಸೂಚನೆ ನೀಡಿದ್ದಾರೆ. ಆ ವೇಳೆಗಾಗಲೇ 5ನೇ ಮಹಡಿಯಲ್ಲಿದ್ದ ಗಿರಿ ಪರಾರಿಯಾಗಿದ್ದ.

ಪಬ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿದ್ದ 250 ಮಂದಿ ಡ್ಯಾನ್ಸ್ ಗರ್ಲ್ಸ್‌ಗಳನ್ನು ರಕ್ಷಿಸಿ, 230ಕ್ಕೂ ಹೆಚ್ಚು ಮಂದಿ ಗಿರಾಕಿಗಳು, ಪಬ್‌ಗಳ ಸಿಬ್ಬಂದಿಯನ್ನು ಬಂಧಿಸಲಾಗಿದೆ. ನಗರದಲ್ಲಿ ಕೆಲ ವರ್ಷಗಳ ನಂತರ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. ಪಬ್‌ಗೆ ಗಿರಿ ಬಂದಿದ್ದ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡು ಬಂಧಿಸಿರುವ ಗಿರಾಕಿಗಳು, ಸಿಬ್ಬಂದಿಗಳ ಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News