ರಾಜ ಮತ್ತು ಮುದುಕಿ

Update: 2019-06-15 17:53 GMT

ಅವಳ ಬೆನ್ನು ಬಗ್ಗಿ ಹೋಗಿದ್ದಿತು. ಆದರೂ ಆ ಮುದುಕಿ ತನ್ನ ಕೈಗಳಲ್ಲಿ ಕಸುವು ತುಂಬಿಕೊಂಡು ದೋಟಿಯಿಂದ ಮರದ ಕೊಂಬೆಯಲ್ಲಿ ಜೋತಾಡುತ್ತಿದ್ದ ಎರಡು ಸೀಬೆ ಹಣ್ಣುಗಳನ್ನು ಕೀಳಲು ಪ್ರಯತ್ನಿಸುತ್ತಿದ್ದಳು. ಸೀಬೆ ಹಣ್ಣುಗಳೋ ರೆಂಬೆಗೇ ಆತುಕೊಂಡು ಒಲ್ಲೆ, ಬರಲೊಲ್ಲೆ ಅನ್ನುತ್ತಿದ್ದವು.

ಚರಪರ ಚರಪರ ಸದ್ದಾಯಿತು. ಈ ಕಗ್ಗಾಡಿನಲ್ಲಿ ಈ ಹೊತ್ತಿನಲ್ಲಿ ಯಾರಪ್ಪಾ ಎಂದು ಮುದುಕಿ ಕಣ್ಣನ್ನು ಹಿಗ್ಗಿಸಿ ನೋಡಿದಳು. ತಲೆಯ ಮೇಲೊಂದು ಫಳಫಳ ಎನ್ನುವ ಬಟ್ಟಲನ್ನು ಕವುಚಿ ಹಾಕಿಕೊಂಡು ಎದೆಗೆ ಅರಶಿನ ಬಣ್ಣದ ತಗಡನ್ನು ಸುತ್ತಿಕೊಂಡಿರುವ ಕಟ್ಟು ಮಸ್ತಾದ ಮನುಷ್ಯನೊಬ್ಬ ನಡೆದುಕೊಂಡು ಇವಳತ್ತಲೇ ಬರುವುದು ಕಾಣಿಸಿತು.

ಆ ವ್ಯಕ್ತಿ ಮುದುಕಿಯ ಹತ್ತಿರ ಬಂದು. ‘‘ಅಜ್ಜಿ.... ಕುಡಿಯಲು ನೀರು ಇದೆಯೇ’’ ಎಂದು ಕೇಳಿದ. ಅಜ್ಜಿ ಅಲ್ಲೇ ಹರಿಯುತ್ತಿದ್ದ ಸಣ್ಣ ತೊರೆಯತ್ತ ಕೈದೋರಿದಳು.

ನೀರು ಕುಡಿದು ಸುಧಾರಿಸಿಕೊಂಡ ಆ ಮನುಷ್ಯ ‘‘ಕಾಡಿನಲ್ಲಿ ದಾರಿ ತಪ್ಪಿತು. ನನ್ನ ಪರಿವಾರದವರು ಇಲ್ಲೇ ಎಲ್ಲೋ ಇರುವರು, ಹುಡುಕಿಕೊಂಡು ಬರಬಹುದು’’ ಎಂದು ಹೇಳಿ ನೆಲಕ್ಕೆ ಒರಗಿದ್ದ ಒಂದು ಮರದ ಬೊಡ್ಡೆಯ ಮೇಲೆ ಕೂತ. ‘‘ಇದೇನಿದು ತಲೆಯ ಮೇಲೆ ಬಟ್ಟಲು ಕವುಚಿಕೊಂಡಿರುವೆಯಲ್ಲ, ಇದೇನಿದು ತಗಡು ಎದೆಗೆ ಕಟ್ಟಿಕೊಂಡಿರುವೆಯಲ್ಲ...’’ ಎಂದು ಮುದುಕಿ ಕೇಳಿದಳು. ಆ ಮನುಷ್ಯ ನಕ್ಕು ‘‘ಅದು ಕಿರೀಟ ಇದು ಕವಚ’’ ಎಂದು ವಿವರಿಸಿದ. ‘‘ಯಾರಪ್ಪ ನೀನು ಹೆಸರೇನು’’ ಎಂದು ಕೇಳಲು ಆತ ತಾನು ಈ ಸೀಮೆಯ ರಾಜ ಎಂದು ಹೇಳಿದ. ತನ್ನ ಅರಮನೆ ಸೈನ್ಯ ಸಂಪತ್ತು ಇತ್ಯಾದಿ...ಇತ್ಯಾದಿಗಳ ಬಗ್ಗೆ ಸಣ್ಣ ವಿವರಣೆ ಕೊಟ್ಟ. ಮುದುಕಿಗೆ ಅವನು ಹೇಳಿದ್ದು ಒಂದೂ ತಲೆಗೆ ಹೋದಂತೆ ಕಾಣಲಿಲ್ಲ. ಅದರ ಬಗ್ಗೆ ಹೆಚ್ಚು ಆಸಕ್ತಿ ತೋರದೆ ‘‘ಮದುವೆ ಆಗಿದೆಯೇ? ಮಕ್ಕಳು ಎಷ್ಟು? ಹೊಟ್ಟೆ ಹೊರೆಯಲು ಏನು ಮಾಡುತ್ತೀಯಾ?’’ಎಂದು ಕೇಳಿದಳು. ರಾಜ ಪ್ರಜೆಗಳ ಪರಿಪಾಲನೆ ತನ್ನ ಕೆಲಸ ಎಂದ. ‘ಕೈಕಾಲು ಇರುವ ಮನುಷ್ಯರು ಗೇದು ತಿಂದು ಸಾಯುವರು ಅಂದುಕೊಂಡಿದ್ದೆ, ಅವರನ್ನು ನೋಡಿಕೊಳ್ಳಲು ಈ ವ್ಯವಸ್ಥೆ ಇದೆ ಎನ್ನುವುದು ನನಗೆ ಗೊತ್ತೇ ಇಲ್ಲಾ... ಈ ಹಣ್ಣಿನ ಮರಗಳು, ಹರಿಯುವ ಹಳ್ಳ-ಕೊಳ್ಳ ಸಣ್ಣ ಗುಡಿಸಲು, ಇಷ್ಟೇ ಗೊತ್ತಿರುವುದು’’ ಎಂದಳು. ಒಬ್ಬ ಮಗನಿರುವನೆಂದೂ ಕಲ್ಲು ಕೆತ್ತುವ ಕೆಲಸ ಮಾಡಿ ಭತ್ತ ಉಪ್ಪು ಹುಣಿಸೆಹಣ್ಣು ಸಂಜೆಗೆ ತರುವನೆಂದೂ ಹೇಳಿದಳು.

‘‘ತಿನ್ನಲು ಏನಾದರೂ ಇದೆಯೇ?’’ ಎಂದು ಕೇಳಲು ದೋಟಿಯನ್ನು ನೀಡಿ ತುಸು ಹಳದಿಗೆ ತಿರುಗಿರುವ ಆ ಹಣ್ಣುಗಳೆರಡನ್ನು ಬೀಳಿಸು ಎಂದಳು. ನೆಲ ಬಗೆದು ಸಣ್ಣಪುಟ್ಟ ಗೆಡ್ಡೆಗಳನ್ನು ತೆಗೆದು ನೀರಿನಲ್ಲಿ ತೊಳೆದು ನೀಡಿದಳು. ಗಂಜಿ ಬೇಯಿಸಲು ಕಾಳುಕಡ್ಡಿ ಇಲ್ಲ ಎಂದು ಒಂದಿಷ್ಟು ಹಸಿರೆಲೆಗಳನ್ನು ಆರಿಸಿ ತಂದು ಬೇಯಿಸಿ ತಾನೂ ತಿಂದು ಅವನಿಗೂ ನೀಡಿದಳು. ಅಷ್ಟರಲ್ಲಿ ರಾಜನ ಪರಿವಾರ ಅವನನ್ನು ಹುಡುಕಿಕೊಂಡು ಬಂದಿತು. ಇಷ್ಟೆಲ್ಲಾ ಉಪಚರಿಸಿದ ಮುದುಕಿಗೆ ಏನಾದರೂ ನೀಡಲು ರಾಜನಿಗೆ ಮನಸ್ಸಿದ್ದರೂ ಮುದುಕಿಗೆ ಉಪಯೋಗವಾಗಬಹುದಾದ ಯಾವ ವಸ್ತುವೂ ಸದ್ಯ ಅವನ ಬಳಿ ಇರಲಿಲ್ಲ. ಮತ್ತೆ ಎಂದಾದರೂ ಬಂದು ನೀಡುವೆ- ಕಾಣುವೆ ಎಂದಾತ ಹೇಳಲು, ಮುದುಕಿ ಖಡಕ್ಕಾಗಿ ‘‘ಈ ಸಲವೇನೋ ಹಳ್ಳದಲ್ಲಿ ನೀರಿತ್ತು, ಮರದಲ್ಲಿ ಹಣ್ಣಿತ್ತು, ಗಡ್ಡೆ ಗೆಣಸು ಸಿಕ್ಕಿತು. ಸದಾಕಾಲ ಸಿಗುವುದಿಲ್ಲ ಹಾಗಾಗಿ ದಾರಿ ತಪ್ಪಬೇಡ, ಬರುವುದೂ ಬೇಡ’’ ಎಂದು ಬೀಳ್ಕೊಟ್ಟಳು.

Writer - ಸವಿತಾ ನಾಗಭೂಷಣ

contributor

Editor - ಸವಿತಾ ನಾಗಭೂಷಣ

contributor

Similar News