ಅಕ್ರಮ ವಿದೇಶಿಗರನ್ನು ಇರಿಸಲು ಹೆಚ್ಚುವರಿ 10 ಬಂಧನ ಕೇಂದ್ರ ಕೋರಿದ ಅಸ್ಸಾಂ

Update: 2019-06-15 18:04 GMT

ಗುವಾಹತಿ, ಜೂ. 15: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಅಂತಿಮಗೊಳಿಸುವ ಗಡು ಹತ್ತಿರ ಬರುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಿದೇಶಿಗರ ವಾಸ್ತವ್ಯದ ಸಮಸ್ಯೆ ಉಂಟಾಗುವ ಹಿನ್ನೆಲೆಯಲ್ಲಿ ಹೆಚ್ಚುವರಿ 10 ಬಂಧನಾ ಕೇಂದ್ರಗಳನ್ನು ನಿರ್ಮಿಸಲು ಅಸ್ಸಾಂ ಸರಕಾರ ಸಿದ್ಧತೆ ನಡೆಸುತ್ತಿದೆ.

ನಾವು ಹೆಚ್ಚುವರಿ 10 ಬಂಧನಾ ಕೇಂದ್ರಗಳನ್ನು ನಿರ್ಮಿಸಲು ಶೀಘ್ರ ಅನುಮೋದನೆ ನೀಡುವಂತೆ ಕೋರಿ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ ಕಳುಹಿಸಿದ್ದೇವೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಜಿಲ್ಲಾ ಕಾರಾಗೃಹಗಳನ್ನು ಹೊರತುಪಡಿಸಿ 6 ಬಂಧನಾ ಕೇಂದ್ರಗಳಿವೆ. ಮೊದಲ ವಿಶೇಷ ಬಂಧನಾ ಕೇಂದ್ರ ಸುಮಾರು 460 ದಶಲಕ್ಷ ರೂಪಾಯಿ ವೆಚ್ಚದಲ್ಲಿ ಕೆಳ ಅಸ್ಸಾಂನ ಗೋಲ್‌ಪಾರದಲ್ಲಿ ನಿರ್ಮಾಣವಾಗುತ್ತಿದೆ. ಈ ಬಂಧನಾ ಕೇಂದ್ರ 3000 ವ್ಯಕ್ತಿಗಳು ವಾಸ್ತವ್ಯದ ಸಾಮರ್ಥ್ಯ ಹೊಂದಿದೆ. ನೂತನ ಬಂಧನಾ ಕೇಂದ್ರಗಳಿಗೆ ನಿವೇಶನಗಳನ್ನು ಗುರುತಿಸಲಾಗಿದೆ. ಆದರೆ, ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘‘ಎನ್‌ಆರ್‌ಸಿ ಬಳಿಕ ಘೋಷಿತ ವಿದೇಶಿಯರ ಸಂಖ್ಯೆ ಹೆಚ್ಚಾಗಬಹುದು.’’ ಎಂದು ಅವರು ಹೇಳಿದ್ದಾರೆ. ಎನ್‌ಆರ್‌ಸಿಯಿಂದ ಹೊರಗುಳಿದರೆ ಅಥವಾ ಅಂತಿಮವಾಗಿ ವಿದೇಶಿಯರು ಎಂದು ಘೋಷಣೆ ಮಾಡಿದರೆ, ಅವರನ್ನು ಏನು ಮಾಡುವುದು ಎಂಬುದಕ್ಕೆ ಈಗ ಯಾವುದೇ ಸ್ಪಷ್ಟತೆ ಅಥವಾ ನೀತಿ ಇಲ್ಲ. ಆದುದರಿಂದ ಹೆಚ್ಚುವರಿ ಬಂಧನಾ ಕೇಂದ್ರಗಳ ನಿರ್ಮಾಣ ನಮಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಎನ್‌ಆರ್‌ಸಿ ಅಂತಿಮ ಪಟ್ಟಿಗೆ ಜುಲೈ 31 ಅಂತಿಮ ಗಡುವನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಈ ಪಟ್ಟಿಯಲ್ಲಿ ಹೆಸರು ಒಳಗೊಂಡಿರದೇ ಇರುವವರು ತನ್ನ ಭಾರತೀಯ ಪೌರತ್ವ ಸಾಬೀತುಪಡಿಸಲು ವಿದೇಶ ನ್ಯಾಯಾಧಿಕರಣವನ್ನು ಸಂಪರ್ಕಿಸುವ ಅವಕಾಶ ವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News