ಮುತ್ಸದಿಗಳ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯ: ಎಚ್.ಎಸ್.ದೊರೆಸ್ವಾಮಿ

Update: 2019-06-16 16:28 GMT

ಬೆಂಗಳೂರು, ಜೂ.16: ಲೋಕಸಭಾ ಚುನಾವಣೆಯಲ್ಲಿ ದೇಶದ ಹಿರಿಯ ಮುತ್ಸದಿಗಳು ಹೀನಾಯವಾಗಿ ಸೋತಿದ್ದರೂ, ಅದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ಸಮಕಾಲೀನ ಸಮಾಜಿಕ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಹಿರಿಯ ಲೇಖಕ ಡಾ.ಜಿ.ರಾಮಕೃಷ್ಣ ಅವರ ‘ವರ್ತಮಾನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ದೇಶದ ಹಿರಿಯ ರಾಜಕೀಯ ಧುರೀಣರು ಸೋತಿರುವುದು ಆತಂಕಕಾರಿ ವಿಷಯ ಎಂದರು.

ಈ ಬಾರಿಯ ಚುನಾವಣೆಯಲ್ಲಿ ದೇಶ ಕಂಡ ಅತ್ಯುತ್ತಮ ರಾಜಕೀಯ ಮುತ್ಸದಿಗಳು ಸೋಲನ್ನು ಅನುಭವಿಸಿದ್ದಾರೆ. ಆದರೆ ಯಾಕೆ ಹೀಗಾಯ್ತು ಎಂಬ ಬಗ್ಗೆ ಅವರು ಆತ್ಮವಲೋಕನ ಎಲ್ಲರೂ ಮಾಡಿಕೊಳ್ಳಬೇಕು. ದೇಶದಲ್ಲಿ ಮತಾಂಧ ಶಕ್ತಿಗಳು ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಧಿಕ್ಕನ್ನು ಸರಿದಾರಿಯಲ್ಲಿ ನಡೆಸುವ ಕೆಲವರಾದರೂ ಸಂಸತ್ತಿನಲ್ಲಿರಬೇಕಿತ್ತು ಎಂದರು.

ಇತ್ತೀಚಿನ ಚುನಾವಣೆ ಫಲಿತಾಂಶ ನೋಡಿದಾಗ ಜನರು ಕೂಡ ಮತಾಂಧರಾಗಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ. ಜನರು ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿಯನ್ನು ಕಳೆದು ಕೊಂಡಿದ್ದಾರೆಯೇ ಎಂದನಿಸುತ್ತದೆ. ಒಳ್ಳೆಯದ್ದು, ಕೆಟ್ಟದರ ಬಗ್ಗೆ ವಿಚಾರ ಮಾಡುವುದನ್ನೆ ಜನರು ಮರೆತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ನಾವು ಹೇಳಿದ್ದನ್ನೇ ಒಪ್ಪಬೇಕು, ನಾವು ಹೇಳುವುದೇ ಸರಿ ಎಂದು ಹೇಳುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆಯನ್ನು ಬಲವಂತವಾಗಿ ದೇಶದ ಜನರ ಮೇಲೆ ಹೇರುತ್ತಿದ್ದಾರೆ. ಇದು ಎಂದಿಗೂ ನಡೆಯಲು ಅವಕಾಶ ನೀಡುವುದಿಲ್ಲ. ಬಹುಮುಖಿಯಾಗಿ ಚಿಂತನೆ ಮಾಡಿ ಕೆಲಸ ಮಾಡುವ ಕಾರ್ಯ ಆಗಬೇಕಾಗಿದೆ. ಯಾವುದೇ ಧರ್ಮದ ಶಾಸ್ತ್ರವಾಗಿರಲಿ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಹೆಕ್ಕಿಕೊಂಡು ಬೇಡವಾದ ಅಂಶಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿ ಕೇವಲ ಚಳವಳಿ ಮಾಡುವುದರಿಂದಲೇ ಏನೂ ಉಪಯೋಗವಿಲ್ಲ. ಅಲ್ಲದೆ, ಕೇವಲ ಹೋರಾಟಗಳಿಂದಲೇ ಪರಿಹಾರ ಸಿಗುವುದಿಲ್ಲ. ಹೀಗಾಗಿ, ಪರಿಹಾರ ಹುಡುಕುವ ಕಡೆಗೆ ಚಳವಳಿಯನ್ನು ಕಟ್ಟಬೇಕು. ಇಂದಿನ ಯುವ ಸಮುದಾಯ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿದ ಶಶಿಧರ್ ಢೋಂಗ್ರೆ, ‘ವರ್ತಮಾನ’ ಕೃತಿಯಲ್ಲಿ ಲೇಖಕರು ರಾಷ್ಟ್ರೀಯತೆ ವ್ಯಾಖ್ಯಾನ, ಮನುವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮನುವಾದದ ಬಗ್ಗೆ ಹೆಚ್ಚು ಹೇಳಲಾಗಿದೆ ಎಂದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಲೇಖಕ ಡಾ.ಜಿ. ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News