ಪರಿಸರ ಸಂರಕ್ಷಣಾ ಅಭಿಯಾನ: ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಪೇಪರ್‌ ಬ್ಯಾಗ್‌ ವಿತರಣೆ

Update: 2019-06-16 16:31 GMT

ಬೆಂಗಳೂರು, ಜೂ.16: ಕೆ.ಆರ್.ಪುರ ಬಂಜಾರ ಬಡಾವಣೆಯ ಸ್ಫೂರ್ತಿ ಸಾಗರಿಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ಸಿದ್ಧಪಡಿಸಿದ್ದ 500ಕ್ಕೂ ಹೆಚ್ಚು ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಗಳನ್ನು ರಸ್ತೆ ಬದಿಯಿರುವ ಅಂಗಡಿ ಮುಂಗಟ್ಟುಗಳಿಗೆ ಉಚಿತವಾಗಿ ವಿತರಿಸಿದರು.

ಇನ್ನೂರಕ್ಕೂ ಹೆಚ್ಚು ಮರಗಳಿಗೆ ಹಸಿರು ಪಟ್ಟಿ ಬರೆದು, ಮರಗಳಿಗೆ ನನ್ನನ್ನು ಕಡಿಯಬೇಡಿ ಎನ್ನುವ ಸಂದೇಶವನ್ನು ಬರೆದು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಸಿಮೆಂಟ್ ಅಂಗಡಿ, ಇಸ್ತ್ರಿ ಮಾಡುವ ಅಂಗಡಿ, ಮೊಬೈಲ್ ಅಂಗಡಿ, ದೇವಸ್ಥಾನ, ಗ್ಯಾರೇಜ್, ಕಿರಾಣಿ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ಸಸಿಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ, ಗಿಡಮರಗಳನ್ನು ಕಡಿಯಬೇಡಿ, ಸಸಿಗಳನ್ನು ಮಕ್ಕಳಂತೆ ಪೋಷಿಸಿ ಎನ್ನುವ ಘೋಷಣೆಗಳೊಂದಿಗೆ ಶಾಲಾ ಮಕ್ಕಳು ಕಲ್ಕೆರೆ, ಅಗರ ಮುಖ್ಯರಸ್ತೆ, ಬಂಜಾರ ಬಡಾವಣೆ, ಖಾನೆ ರಸ್ತೆಗಳಲ್ಲಿ ಜಾಥಾ ನಡೆಸಿದರು. ಮಕ್ಕಳ ಪರಿಸರ ಪ್ರೀತಿ, ಕಾಳಜಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ವೇಳೆ ಶಾಲಾ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದಿಂದಾಗಿ ಪರಿಸರದಿಂದ ನಾವು ದೂರವಾಗುತ್ತಿದ್ದೇವೆ. ಈಗಿನ ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಅರಿವಿಲ್ಲ. ಹೀಗಾಗಿ ಮಕ್ಕಳಿಗೆ ಪರಿಸರ ಕುರಿತು ತಿಳುವಳಿಕೆ ನೀಡುತ್ತಾ ಪರಿಸರ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಎಸ್.ಆರ್.ಜಾನಕಿ ಮಾತನಾಡಿ, ಪರಿಸರದ ಜಾಗೃತಿ ಕುರಿತು ಒಂದು ತಿಂಗಳುಗಳ ಕಾಲ ಅಭಿಯಾನ ಆಚರಿಸಲಾಗುತ್ತದೆ. ಮಕ್ಕಳು ತಮ್ಮ ಕೈಯಿಂದಲೇ ತಯಾರಿಸಿದ ಪೇಪರ್ ಬ್ಯಾಗ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಲಾ ನಿರ್ದೇಶಕ ರಘುನಾಥ್, ರೇಖಾ ರಘುನಾಥ್, ಕಾರ್ಯದರ್ಶಿ ಮಹದೇವ, ಶಿಕ್ಷಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News