ಅಘೋರಿಗಳು ಸಮಾಜಕ್ಕೆ ಸೇರದಂತೆ ಬದುಕುತ್ತಿರುವರು: ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ

Update: 2019-06-16 16:42 GMT

ಬೆಂಗಳೂರು, ಜೂ.16: ಸಮಾಜದಲ್ಲಿ ಇದ್ದರೂ ಸಮಾಜಕ್ಕೆ ಸೇರದವರಂತೆ ಬದುಕುತ್ತಿರುವ ಈ ಲೋಕದ ಪ್ರಜೆಗಳು ಅಘೋರಿಗಳಾಗಿದ್ದಾರೆ ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಆಯೋಜಿಸಿದ್ದ ಅಘೋರಿಗಳ ಲೋಕದಲ್ಲಿ, ಕಿವಿ ಕಾಂಗರೂಗಳ ನಾಡಿನಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಘೋರಿಗಳು ಅವರದೇ ಆದ ಕಟ್ಟುಪಾಡುಗಳು, ಆಚಾರ, ನಡುವಳಿಕೆಗಳನ್ನು ಹೊಂದಿ ಶಿಷ್ಟ ಸಮಾಜಕ್ಕೆ ತೀರ ಭಿನ್ನ ನೆಲೆಯಲ್ಲಿ ಚಲಿಸುತ್ತಾರೆ. ಆದರೆ, ಇಂದಿನ ನಮ್ಮ ಸಮಾಜದಲ್ಲಿ ಬದುಕುತ್ತಿದ್ದರೂ, ಜನರು ಅವರನ್ನು ಮನುಷ್ಯರಂತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಿನ್ನಬಾರದನ್ನು ತಿನ್ನುತ್ತಾ, ಕುಡಿಯಬಾರದನ್ನು ಕುಡಿಯುತ್ತಾ ಇರುವವರು ಅಘೋರಿಗಳು. ಸಮಾಜ ಮೈಮುಚ್ಚಿಕೊಳ್ಳುತ್ತೇವೆ ಎಂದರೆ ನಾವು ಬೆತ್ತಲೆಯಾಗಿ ಇರುತ್ತೇವೆ ಎನ್ನುವರರು. ಮದುವೆ ಚೌಕಟ್ಟಿಗೆ ಒಳಗಾಗದವರು, ಮಂಗಳವನ್ನು ಉಂಟು ಮಾಡಲು ಅಮಂಗಳದಲ್ಲಿ ತೊಡಗಿರುವಂತಹ ಒಂದು ಮನೋಧರ್ಮದ ಗುಂಪೇ ಅಘೋರಿಗಳು ಎಂದರು.

ಲೇಖಕಿ ಕೆ.ಎಸ್.ಚೈತ್ರ ಮಾತನಾಡಿ, ನಮ್ಮ ಅನುಭವಕ್ಕೆ ದಕ್ಕುವುದು ಈ ಲೋಕ. ಆದರೆ, ಲೇಖಕ ಕೆ.ಮುಕುಂದನ್ ಪ್ರವಾಸಕಥನದ ಮೂಲಕ ಅಘೋರಿಗಳ ಲೋಕಕ್ಕೆ ಪ್ರವೇಶಿಸಿ ಅಲ್ಲಿನ ವಿಚಾರಗಳನ್ನು ಅಕ್ಷರ ರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಉತ್ತಮ ಕೃತಿ ರಚನೆಗೆ ಭಾವನೆ, ಕಲ್ಪನೆ ಸಹನೆಯೂ ಮುಖ್ಯವಾಗಿ ಬೇಕಾಗಿದೆ ಎಂದು ನುಡಿದರು. ನಮ್ಮ ಸಮಾಜಕ್ಕಿಂತ ಹೊರಗಡೆ ಒಂದು ಪ್ರಪಂಚವಿದೆ. ಅಲ್ಲಿನ ಜನತೆ ಯಾವ ರೀತಿ ಬದುಕುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಜೊತೆಗೆ ಅಲ್ಲಿನ ಜನತೆಯ ನಂಬಿಕೆಗಳನ್ನು ಮಾತ್ರ ಕಟ್ಟಿಕೊಟ್ಟಿದ್ದಾರೆ. ನಿರ್ಣಯವನ್ನು ಓದುಗರಿಗೆ ಬಿಟ್ಟಿದ್ದಾರೆ ಎಂದರು. 

ಲೇಖಕ ಎನ್.ಎಸ್.ಶ್ರೀಧರಮೂರ್ತಿ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಅಂತರ್ಜಾಲದ ಪ್ರಭಾವದಿಂದ ಪ್ರವಾಸ ಕಥನಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲವೂ ಅಂತರ್ಜಾಲದಲ್ಲಿಯೇ ಸಿಗುವ ವ್ಯವಸ್ಥೆಯಿದೆ. ಅಲ್ಲದೆ, ಎಲ್ಲವೂ ಅಲ್ಲೇ ಸಿಗುತ್ತದೆ ಎಂದೂ ವೈಭವೀಕರಿಸಲಾಗಿದೆ. ಇದು ಅಪಾಯಕಾರಿ ಸಂಗತಿ ಎಂದು ಹೇಳಿದರು.

ಕಿವಿ ಕಾಂಗರೂಗಳ ನಾಡಿನಲ್ಲಿ ಪ್ರವಾಸ ಕಥನದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವ್ಯತ್ಯಾಸವನ್ನು ಕಾಣಬಹುದು. ಹವಮಾನ ವೈಪರೀಥ್ಯವನ್ನು ವಿಭಿನ್ನವಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿನ ನಿರುದ್ಯೋಗ ಸಮಸ್ಯೆಗಳನ್ನು ಸಹ ತಿಳಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂತೋಷಕುಮಾರ ಮೆಹೆಂದಳೆ, ಕೆ.ಮುಕುಂದನ್, ಪ್ರಕಾಶದದ ಕಂಬತ್ತಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News