ಗಿರಡ್ಡಿ ರಚಿಸಿದ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ: ಸಾಹಿತಿ ಸಿ.ಎನ್.ರಾಮಚಂದ್ರನ್

Update: 2019-06-16 17:50 GMT

ಬೆಂಗಳೂರು, ಜೂ.16: ಸಾಹಿತಿ ಗಿರಡ್ಡಿ ಗೋವಿಂದರಾಜ ಅವರು ರಚಿಸಿದ ಸಾಹಿತ್ಯದ ಕೃಷಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುತ್ತದೆ ಹಿರಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ. 

ರವಿವಾರ ನಯನ ಸಭಾಂಗಣದಲ್ಲಿ ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅವಿರತ ಪುಸ್ತಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗಿರಡ್ಡಿ ಗೋವಿಂದರಾಜ: ವ್ಯಕ್ತಿ ವಾಙ್ಞಯ ಕೃತಿ ಲೋಕಾರ್ಪಣೆ ಹಾಗೂ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಿರಡ್ಡಿ ಅವರು ಶ್ರೇಷ್ಠ ಕಥೆ, ಕವನ, ವಿಮರ್ಶೆ, ಸಂಶೋಧನೆ, ಲಲಿತ ಪ್ರಬಂಧ ಸೇರಿ ಒಟ್ಟು ಆರು ವಿಧದ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವರ ಸಾಹಿತ್ಯದ ಕೃಷಿ ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತದೆ. ಈ ಸಾಹಿತ್ಯದ ಕೃಷಿಗೆ ಸಾಹಿತಿ ದಕ್ಷಿಣ ಮೂರ್ತಿ ಅವರ ಸಹಕಾರವೂ ಇದೆ ಎಂದು ಅಭಿಪ್ರಾಯಿಸಿದರು.

ಯಾವಾಗಲೂ ಮಂದಸ್ಮಿತರಾಗಿರುತ್ತಿದ್ದ ಗಿರಡ್ಡಿ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದುಕೊಂಡೆ ಖ್ಯಾತ ಕವಿಯಾಗಬೇಕೆಂದು ಕನಸು ಕಂಡಿದ್ದರು. ಆದರೆ, ವಿಮರ್ಶರಾಗಿ ಖ್ಯಾತಿ ಗಳಿಸಿದರು. ಗಿರಡ್ಡಿ ಅವರ ಮರ್ಲಿನ್ ಮನ್ರೋ, ಮಣ್ಣು ಹಾಗೂ ಗಾಂಧಿ ಕವನ ಸಂಕಲನವನ್ನು ಪ್ರತಿಯೊಬ್ಬರೂ ಓದಲೇ ಬೇಕಾದ ಕೃತಿಯಾಗಿದೆ. ವಚನವಿನ್ಯಾಸ ವಿಮರ್ಶೆಗೆ ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ಲಭಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ದಕ್ಷಿಣ ಮೂರ್ತಿ ಮತ್ತು ಪ್ರೊ.ಮಹೇಶ ತಿಪ್ಪಶೆಟ್ಟಿ ಅವರುಗಳು ಗಿರಡ್ಡಿ ಒಡನಾಟ ಹೊಂದಿದ್ದರಿಂದ ಈ ರೀತಿಯ ಅದ್ಭುತವಾದ ಕೃತಿ ಸಂಪಾದಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ಕೃತಿಯ ಸಂಪಾದಕರಾದ ಟಿ.ಎಸ್.ದಕ್ಷಿಣಾ ಮೂರ್ತಿ, ಪ್ರೊ.ಮಹೇಶ ತಿಪ್ಪಶೆಟ್ಟಿ, ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News