ಬರವಣಿಗೆ ಕೆಡುಕಿನ ವಿರುದ್ಧದ ಹೋರಾಟದ ಅಸ್ತ್ರವಾಗಲಿ: ಮಂಜು ಬಶೀರ್

Update: 2019-06-16 17:55 GMT

ಬೆಂಗಳೂರು, ಜೂ.16: ದೇಶದಲ್ಲಿ ಇವತ್ತು ಬರೆಯುವುವವರನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಿಂಸಿಸುವ ಕಾಲಘಟ್ಟದಲ್ಲಿ ನಾವಿದ್ದು, ಬರೆಯುವುದನ್ನು ಸಂಭ್ರಮಕ್ಕಿಂತ ಕೆಡುಕಿನ ವಿರುದ್ಧದ ಹೋರಾಟದ ಅಸ್ತ್ರವಾಗಿ ರೂಪಿಸಿಕೊಳ್ಳೋಣವೆಂದು ಪ್ರಾಧ್ಯಾಪಕ ಮಂಜು ಬಶೀರ್ ಅಭಿಪ್ರಾಯಿಸಿದ್ದಾರೆ. 

ರವಿವಾರ ಭಾವನಾ ಪ್ರಕಾಶನ ನಗರದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಯುವಕವಿ ಆಶಿಕ್ ಮುಲ್ಕಿರವರ ‘ಗೀಚಿಟ್ಟೆ’ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾವಿಂದು ಕಣ್ಣೆದುರು ಕಸ ಇದೆ ಎಂದು ತೋರಿಸಿದರೆ, ಕಣ್ಣನ್ನೆ ಕಿತ್ತು ಹಾಕುವ ಸಮಾಜದಲ್ಲಿ ಬದುಕುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಬರವಣಿಗೆ ಮೂಲಕ ಹೇಗೆ ಅಭಿವ್ಯಕ್ತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಪ್ರಾಮಾಣಿಕತೆ, ಸಂವೇದನೆ ಇದ್ದರೆ ಮಾತ್ರ ಬರವಣಿಗೆಯು ಸೃಜನಾತ್ಮಕವಾಗಿಯು, ವಾಸ್ತವಕ್ಕೆ ಹತ್ತಿರವಾಗಿಯು ರೂಪಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವೃತ್ತಿಯಲ್ಲಿ ಪತ್ರಕರ್ತನಾಗಿಯು, ಪ್ರವೃತ್ತಿಯಾಗಿ ಕವಿತೆಗಳನ್ನು ಬರೆಯುತ್ತಿರುವ ಆಶಿಕ್ ಮುಲ್ಕಿ ತನ್ನಂತರಳೊಗಿನ ಪಿಸು ಮಾತುಗಳನ್ನು ಕವಿತೆಯಾಗಿಸಿದ್ದಾನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಸಮೀವುಲ್ಲಾ ಬೆಳಗೂರು ಮಾತನಾಡಿ, ಒಬ್ಬ ಯುವ ಪತ್ರಕರ್ತ ಗೀಚಿಟ್ಟೆ ಕವನ ಸಂಕಲನವನ್ನು ಹೊರ ತರುತ್ತಿದ್ದಾನೆ ಎಂಬುದೆ ಅಚ್ಚರಿ ಹಾಗೂ ಸಂತೋಷದ ಸಂಗತಿಯಾಗಿದೆ. ಪತ್ರಿಕೋದ್ಯಮ ಎಂಬುದು ಈಗ ಕಾರ್ಖಾನೆಯಾಗಿದೆ. ಸದಾ ಒತ್ತಡಗಳ ನಡುವೆ ಜೀವಿಸುತ್ತಲೆ, ಅಲ್ಲಿ ಸಿಗುವ ಕ್ಷಣ ಮಾತ್ರದ ಬಿಡುವಿನಲ್ಲಿ ಕವಿತೆ ರಚಿಸಿರುವುದು, ಉಳಿದ ಪತ್ರಕರ್ತರಿಗೆ ಮಾದರಿಯಾದದ್ದೆಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರದಲ್ಲಿ ಹಿರಿಯ ಪತ್ರಕರ್ತ ರವಿಬೆಳಗೆರೆ, ಕೃತಿಕಾರ ಆಶಿಕ್ ಮುಲ್ಕಿ, ಆಯಿಷಾ ಅಬು ಉಪಸ್ಥಿತರಿದ್ದರು. ಇದೇ ವೇಳೆ ನಾದಾ ಮಣಿನಾಲ್ಕೂರು ಅವರಿಂದ ಸೌಹಾರ್ದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News