ಐಎಂಎ ವಂಚನೆ ಪ್ರಕರಣ: ಸಿಬಿಐ ತನಿಖೆಗೆ ಬಿಎಸ್ಪಿ ಆಗ್ರಹ

Update: 2019-06-17 12:42 GMT

ಬೆಂಗಳೂರು, ಜೂ.17: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖಗೆ ರಾಜ್ಯ ಸರಕಾರ ಒಪ್ಪಿಸಬೇಕು ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಆಗ್ರಹಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್, ಐಎಂಎ ವಂಚನೆ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿರುವ ಗಂಭೀರ ಆರೋಪ ಕೇಳಿಬಂದಿರುವ ಹಿನ್ನಲೆ, ರಾಜ್ಯ ಸರಕಾರ ರಚಿಸಿರುವ ಸಿಟ್‌ನಿಂದ ನ್ಯಾಯಯುತ ತನಿಖೆ ಸದ್ಯವಿಲ್ಲ. ಹಾಗಾಗಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದರು.

ಪಕ್ಷದ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಐಎಂಎ ಬಹು ಕೋಟಿ ಹಣ ವಂಚನೆ ಮಾಡಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಜೊತೆಗೆ, ಐಎಂಎ ಮಾಲಕ ಮುಹಮ್ಮದ್ ಮನ್ಸೂರ್ ಒಡೆತನದ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿ, ಹೂಡಿಕೆದಾರರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಗರಣವು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಇದು ಅಳವಾಗಿ ಯೋಚಿಸಿ ಮಾಡಿರುವ ಮಹಾಮೋಸ. ಹೂಡಿಕೆದಾರರಲ್ಲಿ ಅತಿ ಬಡವರು ಇದ್ದಾರೆ. ಹಾಗಾಗಿ, ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದ ಅವರು, ವಂಚನೆ ಮೊದಲೇ ಸರಕಾರಿ ತನಿಖೆ ಸಂಸ್ಥೆಗಳು ಏಕೆ ಕ್ರಮ ಕೈಗೊಂಡಿಲ್ಲ. ಆರೋಪಿಯನ್ನು ವಿದೇಶಕ್ಕೆ ಹೋಗಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಸಂಚಾಲಕ ಶೇರ್‌ಯಾರ್‌ಖಾನ್, ರಾಜ್ಯ ಖಜಾಂಚಿ ನಹೀದಾ ಸಲ್ಮಾ ಸೇರಿದಂತೆ ಮತ್ತಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News