ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್‌ಐಆರ್

Update: 2019-06-17 15:03 GMT

ಬೆಂಗಳೂರು, ಜೂ.17: ಐಎಂಎ ಸಮೂಹ ಸಂಸ್ಥೆಗಳ ವಂಚನೆ ಆರೋಪ ಪ್ರಕರಣ ಸಂಬಂಧ ಮಾಲಕ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು ಮಾಡಲಾಗಿದೆ.

ತಮಗೆ 45 ಲಕ್ಷ ರೂ ಹಣ ಬಾಕಿ ನೀಡದೆ ಪರಾರಿಯಾಗಿದ್ದಾರೆಂದು ಆರೋಪಿಸಿ ಮೆಡಿಕಲ್ ಫಾರ್ಮಾ ಉದ್ಯಮಿ ಜಯಂತ್ ಮೆಹ್ತಾ, ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ.

ಐಎಂಎ ಕಂಪೆನಿಗೆ ಸೇರಿದ ಫ್ರಂಟ್‌ಲೈನ್ ಫಾರ್ಮಸಿಗೆ 2018ರ ಜುಲೈನಿಂದ ಜಯಂತ್ ಮೆಹ್ತಾ ಅವರು ಔಷಧ ಸರಬರಾಜು ಮಾಡುತ್ತಿದ್ದರು. ಪ್ರತಿ ತಿಂಗಳ 7ರಂದು ಹಣ ಪಾವತಿ ಆಗುತ್ತಿತ್ತು. ಆದರೆ, 2019ರ ಎಪ್ರಿಲ್‌ನಿಂದ ಫ್ರಂಟ್‌ಲೈನ್ ಫಾರ್ಮ ಅವರು ಹಣ ನೀಡಿಲ್ಲ ಎಂದು ಜಯಂತ್ ಮೆಹ್ತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಮನ್ಸೂರ್ ಖಾನ್ ಜೊತೆಗೆ ಐಎಂಎಎಫ್‌ಎಲ್ ಹೆಲ್ತ್ ಕೇರ್, ನವೀದ್ ಅಹ್ಮದ್, ನಾಸೀರ್ ಹುಸೇನ್ ಮತ್ತು ನಿಜಾಮುದ್ದೀನ್ ವಿರುದ್ಧವೂ ಮೆಹ್ತಾ ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪತ್ನಿ ನಿವಾಸದ ಮೇಲೆ ದಾಳಿ
ಐಎಂಎ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಟ್ ತನಿಖಾಧಿಕಾರಿಗಳು, ಮನ್ಸೂರ್ ಅವರ ಪತ್ನಿ ತಬಸ್ಸುಮ್ ಎಂಬವರ ಮನೆ ಮೇಲೆ ಸೋಮವಾರ ದಾಳಿ ನಡೆಸಿದರು ಎನ್ನಲಾಗಿದೆ. ಶಿವಾಜಿನಗರದ ವೆಂಕಟಪ್ಪ ರಸ್ತೆಯಲ್ಲಿರುವ ಮನೆಯಲ್ಲಿ ಕೆಲ ಅಗತ್ಯ ದಾಖಲಾತಿ, ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ತಬಸ್ಸುಮ್ ಅವರು ಮನ್ಸೂರ್ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News