ಐಎಂಎ ವಂಚನೆ ಪ್ರಕರಣ: ಸಿಬಿಐ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-06-17 15:52 GMT

ಬೆಂಗಳೂರು, ಜೂ.17: ಐ ಮಾನಿಟರಿ ಅಡ್ವೈಸರಿ(ಐಎಂಎ) ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸಿಬಿಐ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ನಗರದ ನಿವೃತ್ತ ತೆರಿಗೆ ಅಧಿಕಾರಿ ಇಕ್ಬಾಲ್ ಅಹ್ಮದ್, ಚಿತ್ರದುರ್ಗ ಮೂಲದ ಹೂಡಿಕೆದಾರ ಸಿರಾಜುದ್ದೀನ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಬಿಐ, ರಾಜ್ಯ ಸರಕಾರ, ಐಎಂಎ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್ ಖಾನ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಐಎಂಎ ವಿರುದ್ಧದ ಪ್ರಕರಣ ಸಂಬಂಧ ರಾಜ್ಯ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಲು, ಪ್ರಕರಣದ ತನಿಖೆ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಉತ್ತರಿಸಲು, ಆರೋಪಿ ಮನ್ಸೂರ್ ಖಾನ್‌ಗೆ ವಂಚನೆ ಆರೋಪಕ್ಕೆ ನ್ಯಾಯಪೀಠವು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿದೆ.

ಮನ್ಸೂರ್ ಖಾನ್ ಸಚಿವರು, ಶಾಸಕರು, ಸ್ಥಳೀಯ ಪೊಲೀಸ್, ಪ್ರಭಾವಿ ರಾಜಕಾರಣಿಗಳಿಗೆ ಆಪ್ತನಾಗಿದ್ದಾನೆ. ಪೊಲೀಸರು ಪಾರದರ್ಶಕ ತನಿಖೆ ನಡೆಸುತ್ತಾರೆಯೆಂಬ ನಂಬಿಕೆಯೂ ನಮಗಿಲ್ಲ. ಹೀಗಾಗಿ, ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಸಿಬಿಐ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರವಾಗಿ ಆರ್.ಕೋತ್ವಾಲ್, ವಕೀಲ ಜಿ.ಆರ್.ಮೋಹನ್ ಅವರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News