ಕಾಂಗ್ರೆಸ್ ಪಕ್ಷದೊಂದಿಗೆ ಕೆಪಿಜೆಪಿ ವಿಲೀನ ಸುಳ್ಳು: ಪಕ್ಷದ ಅಧ್ಯಕ್ಷ ಮಹೇಶ್ ಗೌಡ

Update: 2019-06-17 16:01 GMT

ಬೆಂಗಳೂರು, ಜೂ.17: ಅಧಿಕಾರದಾಸೆಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಕರ್ನಾಟಕ ಪ್ರಜ್ಞಾವಂತ ಪಕ್ಷ(ಕೆಪಿಜೆಪಿ) ವಿಲೀನ ಮಾಡಲಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಪಕ್ಷದ ಅಧ್ಯಕ್ಷ ಮಹೇಶ್ ಗೌಡ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಮತ್ತು ಹಣದ ದುರಾಸೆಯಿಂದ ಕರ್ನಾಟಕ ಪ್ರಜ್ಞಾವಂತ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂಬ ವಂದತಿ ಹಬ್ಬಿಸಲಾಗಿದೆ. ಇದು ಸುಳ್ಳಾಗಿದ್ದು ಕೆ.ಪಿ.ಜೆ.ಪಿ ಯಾವುದೇ ಪಕ್ಷದೊಂದಿಗೆ ವಿಲೀನಗೊಂಡಿಲ್ಲ ಎಂದು ತಿಳಿಸಿದರು. ನಮ್ಮ ಪಕ್ಷದ ರಾಣೆಬೆನ್ನೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಆರ್.ಶಂಕರ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತು ಅಧಿಕಾರದ ದುರಾಸೆಗಾಗಿ ನಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಿರುವುದಾಗಿ ಪತ್ರ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ, ಇದು ಸುಳ್ಳಾಗಿದ್ದು, ನಮ್ಮ ಪಕ್ಷ ಸ್ವತಂತ್ರವಾಗಿಯೇ ಇದೆ, ಯಾರೊಂದಿಗೂ ವಿಲೀನವಾಗುವುದಿಲ್ಲ ಎಂದರು.

ಶಾಸಕ ಆರ್. ಶಂಕರ್ ನಮ್ಮ ಪಕ್ಷದ ರಾಷ್ಟ್ರೀಯ ಸಮಿತಿ ಹಾಗೂ ರಾಜ್ಯ ಸಮಿತಿಯಲ್ಲಿ ಪಕ್ಷವನ್ನು ವಿಲೀನಗೊಳಿಸುವುದರ ಬಗ್ಗೆ ಚರ್ಚಿಸದೆ ಮತ್ತು ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಅವರ ಗಮನಕ್ಕೂ ತರದೇ ಏಕಾಏಕಿ ಅವರ ಸ್ವಾರ್ಥಕ್ಕಾಗಿ ನಿರ್ಧಾರ ಪ್ರಕಟಿಸಿರುವುದು ಅಪರಾಧ ಮತ್ತು ಅಸಿಂಧು. ಈ ವಿಚಾರವಾಗಿ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಭೇಟಿಗೂ ಅವಕಾಶ ನೀಡದೇ ಇರುವುದನ್ನು ಗಮನಿಸಿದರೆ ಅವರ ಸ್ವಾರ್ಥಕ್ಕಾಗಿ ಪಕ್ಷವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಪಾದಿಸಿದರು.

ವೈಯಕ್ತಿಕವಾಗಿ ಅವರ ಸ್ಥಾನವನ್ನು ವಿಲೀನ ಮಾಡಿಕೊಳ್ಳುವ ಅಧಿಕಾರ ಅವರಿಗೆ ಇದೆ ಹೊರತು ಪಕ್ಷವನ್ನಲ್ಲ. ಹೀಗಾಗಿ, ಅವರು ಪಕ್ಷವನ್ನು ವಿಲೀನಗೊಳಿಸುವುದಾಗಿ ಪತ್ರ ಬರೆದಿರುವುದು ಸಲ್ಲದು. ನಮ್ಮ ಪಕ್ಷವನ್ನು ಯಾವುದೇ ಪಕ್ಷದೊಡನೆ ವಿಲೀನ ಮಾಡಿಕೊಳ್ಳುವುದಿಲ್ಲ ಎಂಬ ಸಿದ್ಧಾಂತದ ಮೇಲೆ ಕಟ್ಟಲಾಗಿದೆ. ಆ ಸಿದ್ಧಾಂತವನ್ನು ಬಿಟ್ಟು ನಾವು ಯಾವುದೇ ಪಕ್ಷದ ಜೊತೆ ವಿಲೀನ ಮಾಡಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷವು ಸ್ವತಂತ್ರವಾಗಿ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಚುನಾವಣೆ ಎದುರಿಸದಲಿದೆ ಎಂದು ಕಾರ್ಯಕರ್ತರಿಗೆ ಮೂಲಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News