ಐಎಂಎ, ಆ್ಯಂಬಿಡೆಂಟ್ ವಂಚನೆ ಪ್ರಕರಣ: ತನಿಖಾ ಪ್ರಗತಿ ಬಗ್ಗೆ ವರದಿ ನೀಡಲು ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ

Update: 2019-06-17 16:18 GMT

ಬೆಂಗಳೂರು, ಜೂ.17: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣ, ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡಲು ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

ಐಎಂಎ, ಆ್ಯಂಬಿಡೆಂಟ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಜಾರಿ ನಿರ್ದೇಶನಾಲಯದ ಪರ ವಾದಿಸಿದ ವಕೀಲರು, ಆಂಬಿಡೆಂಟ್, ಐಎಂಎ ಸಂಸ್ಥೆಗಳ ವಿರುದ್ಧ ಇಡಿ ಅವರು ಈಗಾಗಲೇ ತನಿಖೆ ಆರಂಭವಾಗಿದ್ದು, ತನಿಖಾ ಪ್ರಗತಿ ಬಗ್ಗೆ ವರದಿ ನೀಡಲು ಸಮಯಾವಕಾಶ ಬೇಕಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ವಂಚಿತ ಆರೋಪಿತ ಸಂಸ್ಥೆಗಳ ವಿರುದ್ಧದ ತನಿಖೆ ಯಾವ ಹಂತದಲ್ಲಿದೆ. ಯಾವ ಕೇಸ್‌ಗಳನ್ನು ಈ ಸಂಸ್ಥೆಗಳ ವಿರುದ್ಧ ದಾಖಲಿಸಿದ್ದೀರಾ. ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಕೈಗೊಂಡ ಕ್ರಮಗಳೇನು ಎಂಬುದರ ಕುರಿತು ವರದಿ ನೀಡಿ ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರಿಗೆ ತಿಳಿಸಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣಗಳ ತನಿಖಾ ಪ್ರಗತಿ ಬಗ್ಗೆ ವರದಿ ನೀಡಲು ಗೃಹ ಇಲಾಖೆಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News