ತಪ್ಪಿತಸ್ಥರಿಗೆ ಕಾಂಗ್ರೆಸ್ ಬೆಂಬಲವಿಲ್ಲ: ದಿನೇಶ್ ಗುಂಡೂರಾವ್

Update: 2019-06-17 16:29 GMT

ಬೆಂಗಳೂರು, ಜೂ.17: ಸಾರ್ವಜನಿಕರ ಹೂಡಿಕೆಯ ಹಣವನ್ನು ದುರುಪಯೋಗ ಪಡಿಸಿಕೊಂಡು ಜನಸಾಮಾನ್ಯರಿಗೆ ಮೋಸವೆಸಗಿರುವ ಐಎಂಎ ಹಗರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ದಳಕ್ಕೆ ವಹಿಸಿರುವ ರಾಜ್ಯ ಸರಕಾರದ ನಿರ್ಧಾರವು ಸ್ವಾಗತಾರ್ಹವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಸಂಬಂಧ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವ ಅವರು, ಕಾಂಗ್ರೆಸ್ ಪಕ್ಷ ಹಾಗೂ ಈ ಹಗರಣದಲ್ಲಿ ಭಾಗಿಯಾಗಿರುವ ಸಂತ್ರಸ್ತರ ಪರವಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಅವ್ಯಾಹತವಾಗಿ ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಹಲವಾರು ಹಣಕಾಸು ಸಂಸ್ಥೆಗಳು ಮತ್ತು ಇನ್ನಿತರ ಸಂಘ-ಸಂಸ್ಥೆಗಳು ಅಮಾಯಕ ಹಾಗೂ ಮುಗ್ಧ ಜನರನ್ನು ವಂಚಿಸಿ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿರುವ ಹಲವಾರು ಉದಾಹರಣೆಗಳಿರುವಾಗ, ರಾಜ್ಯ ಸರಕಾರವು ಐಎಂಎ ಹಗರಣದ ವಿರುದ್ಧ ದಿಟ್ಟ ಹಾಗೂ ನಿಷ್ಠುರ ಕ್ರಮವನ್ನು ಕೈಗೊಳ್ಳುತ್ತಿರುವುದು ಜನಸಾಮಾನ್ಯರಲ್ಲಿ ಸಮಾಧಾನವನ್ನು ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಯಾವಾಗಲೂ ಇಂತಹ ವಿಷಯಗಳಲ್ಲಿ ನಿಷ್ಠುರವಾಗಿ ನಡೆದುಕೊಂಡು ಬಂದಿದ್ದು, ಯಾರೇ ತಪ್ಪೆಸಗಿದ್ದರೂ ಅಂತಹವರಿಗೆ ರಕ್ಷಣೆಯನ್ನು ನೀಡದೇ ಶೋಷಣೆಗೆ ಒಳಗಾದವರ ಪರವಾಗಿ ಯಾವತ್ತು ನಿಂತಿರುತ್ತದೆ. ಹಾಗೆಯೇ, ಈ ಐಎಂಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸಹ ಕಾಂಗ್ರೆಸ್ ಪಕ್ಷವು ಅಂತಹವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ತನಿಖಾದಳದ ವರದಿಯ ಆಧಾರದ ಮೇಲೆ ಈ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ನಿಷ್ಠುರ ಕ್ರಮ ಕೈಗೊಂಡು ಅವರು ಶಿಕ್ಷೆ ಅನುಭವಿಸುವಂತೆ ಮಾಡುವುದು ನಾಗರಿಕ ಸಮಾಜದ ಮತ್ತು ಈ ಸರಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಹಗರಣದಲ್ಲಿ ಮೋಸ ಹೋದಂತಹ ಜನರಿಗೆ ಆದಷ್ಟು ಆದ್ಯತೆ ಮೇರೆಗೆ ಅವರ ಹೂಡಿಕೆ ಹಣವು ಮರಳಿ ಸಿಗುವಂತೆ ಕೂಡಲೇ ಕ್ರಮವನ್ನು ಕೈಗೊಳ್ಳಬೇಕು. ಹಾಗೆಯೇ, ಈ ತರಹದ ಇನ್ನಾವುದೇ ಹಗರಣಗಳಿದ್ದಲ್ಲಿ ಅಂತಹವುಗಳನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಹಗರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ಈ ಹಗರಣದ ವಿರುದ್ಧ ಸರಕಾರವು ತೆಗೆದುಕೊಳ್ಳಬಹುದಾದ ಯಾವುದೇ ಕಠಿಣ ನಿರ್ಧಾರಗಳಿಗೆ ಕಾಂಗ್ರೆಸ್ ಪಕ್ಷವು ಸದಾಕಾಲ ಬೆಂಬಲ ನೀಡುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News