ಮೆಕ್ಯಾನಿಕಲ್ ವಿದ್ಯಾರ್ಥಿಗಳಿಂದ ವಿಶಿಷ್ಟ ಬಸ್ ನಿಲ್ದಾಣ ನಿರ್ಮಾಣ

Update: 2019-06-17 17:04 GMT

ಬೆಂಗಳೂರು, ಜೂ.17: ತೆಂಗಿನ ನಾರಿನ ಮೂಲಕ ನಗರದ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್‌ನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ವಿಶಿಷ್ಟವಾದ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ. ಕಾಲೇಜಿನ 8 ನೆ ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾದ ಮನೋಜ್, ಪವನ್, ಸುರೇಶ್, ಹರ್ಷ ಮೆಕಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ, ರಾಘವೇಂದ್ರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೊನೆ ಸೆಮಿಸ್ಟರ್‌ನಲ್ಲಿ ಪ್ರಾಜೆಕ್ಟ್ ಒಂದನ್ನು ತಯಾರಿಸುವುದು ಕಡ್ಡಾಯ. ಅದರಂತೆ ಈ ವರ್ಷ ನಮ್ಮ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ, ದೀರ್ಘ ಬಾಳಿಕೆಯ ಪರಿಸರ ಸ್ನೇಹಿ ಬಸ್ ನಿಲ್ದಾಣವನ್ನು ತೆಂಗಿನ ನಾರು ಬಳಸಿ ನಿರ್ಮಿಸಿದ್ದಾರೆ. ಇದನ್ನು ನಗರದ ಇತರೆಡೆಗಳಲ್ಲೂ ಅಳವಡಿಸಿದರೆ, ತೆಂಗುನಾರಿನ ಮಂಡಳಿಗೂ ಅನುಕೂಲ, ತೆಂಗು ಬೆಳೆಗಾರರಿಗೂ ಆರ್ಥಿಕವಾಗಿ ನೆರವಾಗಲಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಸುಬ್ರಮಣ್ಯ ರಾಘವೇಂದ್ರ ಹೇಳಿದ್ದಾರೆ.

ಪ್ರಾಜೆಕ್ಟ್ ತಯಾರಿಸಲು ಸುಮಾರು 2 ತಿಂಗಳು ಸಮಯ ತೆಗೆದುಕೊಂಡಿದ್ದು, ಅಂದಾಜು 12 ಸಾವಿರ ರೂ. ಖರ್ಚಾಗಿದೆ. ನಮ್ಮದು ವಿಶಿಷ್ಟ ಹಾಗೂ ಸಮಾಜಕ್ಕೆ ಉಪಯುಕ್ತವಾದ ಪ್ರಾಜೆಕ್ಟ್ ಆಗಿರುವುದರಿಂದ ಕೆಎಸ್‌ಸಿಎಸ್‌ಟಿಯಿಂದ 7,500 ರೂ. ಪ್ರೋತ್ಸಾಹಧನ ಸಿಕ್ಕಿರುವುದು ನಮಗೆ ಸಂತಸ ತಂದಿದೆ ಎಂದು ತಂಡದ ಮುಖಂಡ ಮನೋಜ್ ಅಭಿಪ್ರಾಯಪಟ್ಟರು.

ಸಾಮಾನ್ಯವಾಗಿ ನಗರದಲ್ಲಿ ನಿರ್ಮಿಸುವ ಬಸ್ ತಂಗುದಾಣ 30 ಸಾವಿರ ರೂ.ನಿಂದ 50 ಸಾವಿರ ರೂ. ಹಾಗೂ ಮೇಲ್ಪಟ್ಟು ವೆಚ್ಚ ತಗಲುತ್ತದೆ. ಆದರೆ ನಮ್ಮ ತೆಂಗಿನ ನಾರಿನ ಬಸ್ ತಂಗುದಾಣ ಕಡಿಮೆ ವೆಚ್ಚದ್ದು. ನಾವು ನಿರ್ಮಿಸಿರುವ ನಿಲ್ದಾಣವನ್ನು ನಮ್ಮ ಕಾಲೇಜಿನ ಮುಂಭಾಗದಲ್ಲೇ ಲೋಕಾರ್ಪಣೆಗೊಳಿಸಿದ್ದೇವೆ. ಆರ್ಥಿಕ ನೆರವು ನೀಡಿದರೆ ನಗರದಲ್ಲಿ ಅಗತ್ಯವಿರುವೆಡೆ ಕಡಿಮೆ ವೆಚ್ಚದಲ್ಲಿ ನಿಲ್ದಾಣ ನಿರ್ಮಿಸಿಕೊಡಲು ನಾವು ತಯಾರಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಮನೋಜ್ ಹೇಳಿದ್ದಾರೆ.

ತಂಗುದಾಣದ ವಿಶೇಷತೆ: ಹತ್ತು ಅಡಿ ಉದ್ದ ಮತ್ತು 12 ಅಡಿ ಅಗಲವನ್ನು ಹೊಂದಿದೆ. ತಂಗುದಾಣದ ರ್ೂ ಅನ್ನು ಪೂರ್ತಿ ತೆಂಗಿನ ನಾರಿನಲ್ಲಿ ನಿರ್ಮಿಸಲಾಗಿದ್ದು, ವಾಟರ್ ಪ್ರೂಫ್ ಕೋಟಿಂಗ್ ಮಾಡಿರುವುದರಿಂದ ಮಳೆ ಬಿದ್ದರೆ ನೀರು ಇಳಿಯುವುದಿಲ್ಲ. ಒಂದು ವೇಳೆ ಬೆಂಕಿ ತಾಗಿದರೂ ತಕ್ಷಣಕ್ಕೆ ಯಾವುದೇ ಹಾನಿ ಸಂಭವಿಸದಂತೆ ಗಮ್ ಹಾಕಿ ನಿರ್ಮಿಸಲಾಗಿದೆ. ತೆಂಗುನಾರಿನ ಮಂಡಳಿಯಿಂದ ತಂಗುದಾಣಕ್ಕೆ ಬೇಕಾದ 4 ಇಂಚು 6 ಅಡಿ ಅಳತೆಯ ತೆಂಗಿನ ನಾರಿನ ಪ್ಲೇಟ್‌ಗಳನ್ನು ಖರೀದಿಸಿ ಬಳಸಲಾಗಿದೆ. ಎಡ, ಬಲ ಬದಿಗಳಲ್ಲಿ ಛಾವಣಿಯನ್ನು ನಿಲ್ಲಿಸಲು ಕಬ್ಬಿಣದ ಸರಳುಗಳನ್ನು ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News