ನೇರ ವೇತನ, ಹುದ್ದೆ ಖಾಯಂಗೊಳಿಸಲು ಬಿಬಿಎಂಪಿ ಪೌರ ಕಾರ್ಮಿಕರ ಪಟ್ಟು

Update: 2019-06-17 17:09 GMT

ಬೆಂಗಳೂರು, ಜೂ.17: ಪ್ರತಿ ತಿಂಗಳು ನೇರ ವೇತನ ಪಡೆಯುವ ವ್ಯವಸ್ಥೆ ಹಾಗೂ ಖಾಯಂ ಹುದ್ದೆ ನೀಡಲು ಆಗ್ರಹಿಸಿ ನೂರಾರು ಪೌರಕಾರ್ಮಿಕರು ಸೋಮವಾರ ಬೃಹತ್ ಮೆರವಣಿಗೆ ನಡೆಸಿದರು.

ನಗರದ ಬಿಬಿಎಂಪಿ ಕಚೇರಿ ಎದುರು ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರಕಾರ ಹಾಗೂ ಬಿಬಿಎಂಪಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಮೈಸೂರು ನಾರಾಯಣ, ರಾಜ್ಯ ಮೈತ್ರಿ ಸರಕಾರವಾಗಲಿ ಬಿಬಿಎಂಪಿ ಆಗಲಿ ಇದುವರೆಗೂ ಪೌರಕಾರ್ಮಿಕರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ.ಹಲವು ಬಾರಿ ಮನವಿ ಸಲ್ಲಿಸಿದರೂ, ದಿಟ್ಟ ಕ್ರಮ ಕೈಗೊಂಡಿಲ್ಲ.ಹಾಗಾಗಿ, ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ನೇರ ವೇತನ ನೀಡಬೇಕು. ಜೊತೆಗೆ, 18 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಈ ಕೂಡಲೇ ಖಾಯಂಗೊಳಿಸಬೇಕು. ಅಷ್ಟೇ ಅಲ್ಲದೆ ಪೌರಕಾರ್ಮಿಕರು ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದರೆ, ಅವರ ಸಂಸ್ಕಾರಕ್ಕೆ ಬಿಬಿಎಂಪಿ ವತಿಯಿಂದ ತುರ್ತು 20 ಸಾವಿರ ನೀಡಬೇಕು ಎಂದರು.

ಮೃತ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡಬೇಕು. ಅದೇ ರೀತಿ, ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆಯಂದು ನೇರ ವೇತನ, ಪೌರಕಾರ್ಮಿಕರಿಗೆ ಬಟ್ಟೆ ನೀಡಬೇಕು. ಪೌರ ಕಾರ್ಮಿಕರಿಗೆ ವೇತನ ಚೀಟಿ, ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ತಿಂಗಳಿಗೊಮ್ಮೆ ಮಾಸ್ಟರ್ ಚೆಕ್‌ಅಪ್ ಮಾಡಲು ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News