ಡೋಪಿಂಗ್: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಕಿರ್ವಾಗೆ 4 ವರ್ಷಗಳ ನಿಷೇಧ

Update: 2019-06-17 18:56 GMT

  ಪ್ಯಾರಿಸ್, ಜೂ.17: ಒಲಿಂಪಿಕ್ಸ್‌ನ ಮಹಿಳೆಯರ ಮ್ಯಾರಥಾನ್‌ನಲ್ಲಿ ಬೆಳ್ಳಿ ಜಯಿಸಿದ್ದ ಬಹರೈನ್‌ನ ಯೂನಿಸ್ ಜೆಪ್ಕಿರುಯಿ ಕಿರ್ವಾ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.

ಕೀನ್ಯಾ ಮೂಲದ ಅಥ್ಲೀಟ್ 2016ರಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.

 ಅವರಿಂದ ಸಂಗ್ರಹಿಸಲಾದ ರಕ್ತದ ಮಾದರಿ ಪರೀಕ್ಷೆಯಲ್ಲಿ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಬೆಳಕಿಗೆ ಬಂದಿದೆ. ಅವರಿಗೆ ವಿಧಿಸಲಾದ ಅಮಾನತು ಆದೇಶ 2019ರ ಮೇ 7ರಿಂದ ಜಾರಿಗೆ ಬಂದಿದೆ ಎಂದು ಅಥ್ಲೆಟಿಕ್ಸ್ ಸಮಗ್ರತೆ ಘಟಕ(ಎಐಯು) ಸೋಮವಾರ ಪ್ರಕಟಿಸಿದೆ.

35ರ ಹರೆಯದ ಕಿರ್ವಾ ರಿಯೋ ಒಲಿಂಪಿಕ್ಸ್‌ನಲ್ಲಿ 2 ಗಂಟೆ, 14.13 ಸೆಕೆಂಡ್‌ಗಳಲ್ಲಿ ನಿಗದಿತ ಗುರಿ ತಲುಪಿ ಬೆಳ್ಳಿ ಪಡೆದಿದ್ದರು. ಕೀನ್ಯಾದ ಜೆಮಿಮಾ ಸುಮ್ಗಾಂಗ್ ಚಿನ್ನ ಪಡೆದುಕೊಂಡಿದ್ದರು. ಜೆಮಿಮಾ ಇದೇ ಕಾರಣಕ್ಕಾಗಿ ಕಳೆದ ಜನವರಿಯಲ್ಲಿ 8 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಕಿರ್ವಾ 2015ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News