ಮನ್ಸೂರ್ ಖಾನ್ ಕಚೇರಿ, ಪತ್ನಿ ಮನೆ ಮೇಲೆ ದಾಳಿ: 33 ಕೋಟಿ ಮೌಲ್ಯದ ಚಿನ್ನಾಭರಣ, ದಾಖಲೆ ಜಪ್ತಿ

Update: 2019-06-18 14:06 GMT

ಬೆಂಗಳೂರು, ಜೂ.18: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ಕಚೇರಿ, 3ನೇ ಪತ್ನಿಯ ಮನೆಯ ಮೇಲೆ ದಾಳಿ ನಡೆಸಿರುವ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು, ಬರೋಬ್ಬರಿ 33 ಕೋಟಿ ರೂ. ಬೆಲೆಯ ಚಿನ್ನಾಭರಣ, ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಐಎಂಎ ಜ್ಯುವೆಲರ್ಸ್‌ನ ಕಚೇರಿಯ ಕಟ್ಟಡ ಹಾಗೂ ಮನ್ಸೂರ್ ಖಾನ್‌ನ ವಿಚ್ಛೇದಿತ 3ನೇ ಪತ್ನಿಯ ಮನೆಯ ಮೇಲೆ ಶೋಧ ನಡೆಸಿ, ಚಿನ್ನಾಭರಣ, ದಾಖಲಾತಿ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಸಿಟ್ ಅಧಿಕೃತ ಮೂಲಗಳು ತಿಳಿಸಿವೆ.

ಕಚೇರಿಯಲ್ಲಿ ಎಷ್ಟಿತ್ತು?: ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ಐಎಂಎ ಜ್ಯುವೆಲರ್ಸ್‌ನ ಕಚೇರಿಯಲ್ಲಿ 13 ಕೋಟಿ ರೂ. ಮೌಲ್ಯದ 43 ಕೆ.ಜಿ.ಚಿನ್ನಾಭರಣ, 17.6 ಕೋಟಿ ಮೌಲ್ಯದ 5864 ಕ್ಯಾರೆಟ್ ಡೈಮಂಡ್, 1.5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ, 1.5 ಕೋಟಿ ಮೌಲ್ಯ ಸೈಲ್ಟರ್ ಡೈಮಂಡ್‌ಗಳನ್ನು ಪತ್ತೆಯಾಗಿದೆ.

ಅದೇ ರೀತಿ, ವಿಚ್ಛೇದಿತ 3ನೇ ಪತ್ನಿ ತಬಸ್ಸುಮ್ ಬಾನು ಅವರ ಮನೆಯಲ್ಲಿ ಶೋಧ ನಡೆಸಿದಾಗ, 39.5 ಲಕ್ಷ ಮೌಲ್ಯದ 1,503.7 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ, 2.69 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ 40 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ತಿಲಕ್‌ನಗರದ ಎಸ್‌ಆರ್‌ಕೆ ಗಾರ್ಡನ್‌ನಲ್ಲಿರುವ 1.20 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ನ ದಾಖಲಾತಿಗಳನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿಟ್ ಹೇಳಿದೆ.

ಇದಲ್ಲದೆ, ಆರೋಪಿ ಮನ್ಸೂರ್ ಖಾನ್‌ಗೆ ಸೇರಿದೆ ಎನ್ನಲಾದ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಸ್ಕೂಲ್ ಪ್ರಾಪರ್ಟಿ, ಅಪಾರ್ಟ್‌ಮೆಂಟ್, ಇತ್ಯಾದಿ ಸೇರಿದಂತೆ ಒಟ್ಟು 26 ಸ್ಥಿರಾಸ್ತಿಗಳನ್ನು ಇದುವರೆಗೂ ಗುರುತಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ಕಾರ್ಯಾಚರಣೆಯನ್ನು ಸಿಟ್ ತನಿಖಾ ತಂಡದ ಅಧಿಕಾರಿಗಳಾದ ರವಿಕಾಂತೇಗೌಡ, ಎಸ್.ಗಿರೀಶ್ ಅವರ ಮಾರ್ಗ ದರ್ಶನದಲ್ಲಿ ಎಸಿಪಿ ಬಾಲರಾಜ್, ಡಿವೈಎಸ್ಪಿ ಗಳಾದ ಕೆ.ರವಿಶಂಕರ್, ಬಿ.ಎಸ್.ಅಬ್ದುಲ್‌ ಖಾದರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಅಂಜನ್‌ಕುಮಾರ್, ಬಿ.ಕೆ.ಶೇಖರ್, ಸಿ.ಆರ್.ಗೀತಾ, ಎಂ.ಎ.ಮುಹಮ್ಮದ್, ನರಸಿಂಹಮೂರ್ತಿ ಸೇರಿದಂತೆ ಸಿಬ್ಬಂದಿಗಳ ತಂಡವು ಕೈಗೊಂಡಿತ್ತು. 

ಆಯೋಗದ ಪತ್ರ

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಪತ್ರ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸಂತ್ರಸ್ಥರಿಗೆ ನ್ಯಾಯ ಒದಗಿಸುವಂತೆ ಕೋರಲಾಗಿದೆ.

-ಜಿ.ಎ.ಬಾವಾ, ಅಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News