ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ

Update: 2019-06-18 14:53 GMT

ಬೆಂಗಳೂರು, ಜೂ.18: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಕೊಲೆಯಾಗಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್ ನಿವಾಸಿ ಗಣೇಶ್(35) ಕೊಲೆಯಾಗಿರುವ ವ್ಯಕ್ತಿ ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಶ್ರೀನಿವಾಸ್ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೋಟಾರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಗಣೇಶ, ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮಲ್ಲೇಶ್ವರಂ 8ನೇ ಕ್ರಾಸ್‌ನ ಹೊಟೇಲೊಂದರ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಒಂದೇ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಗಣೇಶ್ ಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಶ್ರೀನಿವಾಸ್ ಅವರ ಮೇಲೆಯೂ ಹಲ್ಲೆ ನಡೆದಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ವೈಯಾಲಿ ಕಾವಲ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News