ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕಿತ್ತು: ಎಚ್.ವಿಶ್ವನಾಥ್

Update: 2019-06-18 16:02 GMT

ಬೆಂಗಳೂರು, ಜೂ.18: ಇತ್ತೀಚೆಗೆ ನಡೆದ ಸಚಿವ ಸಂಪುಟದ ವಿಸ್ತರಣೆಯ ವೇಳೆ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಬಿ.ಎಂ.ಪಾರೂಖ್‌ಗೆ ಅವಕಾಶ ನೀಡಬೇಕಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಂ.ಪಾರೂಖ್‌ಗೆ ಸಚಿವ ಸ್ಥಾನ ಸಿಕ್ಕಿದ್ದರೆ ಒಬ್ಬ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು. ಜೆಡಿಎಸ್ ಒಂದು ಜಾತ್ಯತೀತ ಪಕ್ಷ. ಹೀಗಾಗಿ ಎಲ್ಲ ವರ್ಗಕ್ಕೂ ಅವಕಾಶ ನೀಡಬೇಕಿತ್ತು ಎಂದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡದ ವಿಚಾರ ಸಂಬಂಧ ತಮ್ಮ ಅಸಮಾಧಾನವನ್ನು ಹೊರಹಾಕಿದ ಅವರು, ದಲಿತರಿಗೆ, ಹಿಂದುಳಿದವರಿಗೆ ಅವಮಾನ ಮಾಡಬೇಡಿ. ಸಚಿವ ಸ್ಥಾನ ನೀಡಿ ಎಷ್ಟು ದಿನ ಆಯಿತು. ಆದರೆ ಖಾತೆ ಯಾಕೆ ಇನ್ನೂ ಕೊಟ್ಟಿಲ್ಲ. ಇದೊಂದು ರೀತಿಯ ಅವಮಾನ ಮಾಡಿದ ಹಾಗೆ ಎಂದು ಹೇಳಿದರು.

ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದು ಅವರಿ ಸಲಹೆ ನಿಡಿದರು.

ಜಿಂದಾಲ್ ವಿಚಾರದಲ್ಲಿ ಸಿದ್ದರಾಮಯ್ಯ ಯಾಕೆ ಮೌನವಾಗಿ ಇದ್ದಾರೆ. ತೊಡೆ ತಟ್ಟಿ 350 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದ ಅವರು, ಈಗ ಏನ್ ಮಾಡುತ್ತಿದ್ದಾರೆ. ಸರಕಾರದ ಭಾಗವಾಗಿ ಇದ್ದರು ಯಾಕೆ ಮಾತನಾಡುತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಕೆಲಸವೇ ಮರೆತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News