ಕೆ.ಆರ್.ಮಾರುಕಟ್ಟೆಗೂ 'ಬಡವರ ಬಂಧು' ವಿಸ್ತರಣೆ

Update: 2019-06-18 16:33 GMT

ಬೆಂಗಳೂರು, ಜೂ.18: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್.ಮಾರುಕಟ್ಟೆಗೂ ‘ಬಡವರ ಬಂಧು’ ಯೋಜನೆಯನ್ನು ವಿಸ್ತರಿಸಲು ಸಹಕಾರ ಇಲಾಖೆ ಮುಂದಾಗಿದೆ.

ರಾಜ್ಯ ಸರಕಾರವು ಬೀದಿ ವ್ಯಾಪಾರಿಗಳಿಗೆ ನೆರವು ನೀಡುವ ಉದ್ದೇಶದಿಂದ ಶೂನ್ಯ ಬಡ್ಡಿದರದಲ್ಲಿ ದಿನಕ್ಕೆ 10 ಸಾವಿರದವರೆಗೆ ಸಾಲ ನೀಡುವ ಯೋಜನೆಯನ್ನು ಕಳೆದ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈ ಯೋಜನೆ ಅಡಿಯಲ್ಲಿ ಯಶವಂತಪುರ, ಪೀಣ್ಯ, ಬನಶಂಕರಿಯಲ್ಲಿನ ಮಾರುಕಟ್ಟೆ ವ್ಯಾಪಾರಿಗಳಿಗೆ ಬ್ಯಾಂಕ್ ಅಧಿಕಾರಿಗಳೇ ಬಂದು ಸಾಲ ಕೊಡುತ್ತಿದ್ದಾರೆ. ಆದರೆ, ಕೆ.ಆರ್.ಮಾರುಕಟ್ಟೆಯನ್ನು ಈ ಯೋಜನೆ ಅಡಿಯಲ್ಲಿ ಸೇರ್ಪಡೆ ಮಾಡಿರಲಿಲ್ಲ.

ಮಾರುಕಟ್ಟೆ ಪರಿಸ್ಥಿತಿ ಹೇಗಿದೆ: ಕೆ.ಆರ್.ಮಾರುಕಟ್ಟೆಯಲ್ಲಿ ದಿನಕ್ಕೆ ಶೇ. 10ರ ಬಡ್ಡಿ ದರದಲ್ಲಿ ವ್ಯವಹಾರ ನಡೆಯುತ್ತಿದೆ. ವ್ಯಾಪಾರಿ ಬೆಳಗ್ಗೆ 5 ಗಂಟೆಗೆ ಹತ್ತು ಸಾವಿರ ಸಾಲ ಕೇಳಿದರೆ ಬಡ್ಡಿಯವ ಬಡ್ಡಿ ಮುರಿದುಕೊಂಡು 9 ಸಾವಿರ ನೀಡುತ್ತಾನೆ. ಸಂಜೆ ವೇಳೆಗೆ ಸಾಲ ಪಡೆದವನು ಸಂಪೂರ್ಣ ಸಾಲ ವಾಪಸ್ಸು ನೀಡಬೇಕು. ಇಲ್ಲದಿದ್ದರೆ, ಮುಂದಿನ ದಿನದ 5 ಗಂಟೆ ವೇಳೆಗೆ ಒಂದು ಸಾವಿರ ಹೆಚ್ಚುವರಿ ಬಡ್ಡಿ ಸೇರಿಸಿ ಸಂಪೂರ್ಣ ಸಾಲದ ಹಣ ನೀಡಬೇಕು.

ಇಲ್ಲಿನ ವ್ಯಾಪಾರಿಗಳು ಪಡುತ್ತಿರುವ ಕಷ್ಟ ನಮ್ಮ ಅರಿವಿಗೆ ಬಂದಿದೆ. ಹೀಗಾಗಿ, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿ ಸಾಲ ನೀಡಲು ನೆರವಾಗುವಂತೆ ಕ್ರಮ ಕೈಗೊಳ್ಳುತ್ತೇವೆ. ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಎರಡು ವಾಹನಗಳನ್ನು ಮಾರುಕಟ್ಟೆಯಲ್ಲಿಯೇ ನಿಲ್ಲಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಸಹಕಾರ ಸಚಿವ ಪ್ರತಿಕ್ರಿಯಿಸಿದ್ದಾರೆ.

ಯಾರಿಗೆಲ್ಲಾ ಸಾಲ: ತಳ್ಳುವ ಗಾಡಿ ವ್ಯಾಪಾರಿಗಳು, ಮೋಟಾರು ವಾಹನಗಳಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ತರಕಾರಿ ಮಾರುವವರು, ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಚರ್ಮದ ಉತ್ಪನ್ನಗಳ ರಿಪೇರಿ ಹಾಗೂ ಮಾರಾಟ ಮಾಡುವವರು, ಆಟದ ಸಾಮಾನುಗಳು ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News