ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಎಲ್ಲರೂ ಕೈಜೋಡಿಸಿ: ನ್ಯಾ.ಬಿ.ಶಿವಶಂಕರ್ ಅಮರಣ್ಣನವರ್

Update: 2019-06-18 17:28 GMT

ಬೆಂಗಳೂರು, ಜೂ.18: ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ಸಮಾಜದಲ್ಲಿನ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ನ್ಯಾ.ಬಿ. ಶಿವಶಂಕರ್ ಅಮರಣ್ಣನವರ್ ಸಲಹೆ ನೀಡಿದ್ದಾರೆ.

ಮಂಗಳವಾರ ನಗರದ ಕಬ್ಬನ್ ಪಾರ್ಕ್ ಆವರಣದ ಬಾಲಭವನದಲ್ಲಿ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಶ್ರಮ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಡತನ ನಿರ್ಮೂಲನೆ ಹಾಗೂ ಶಿಕ್ಷಣ ಸೌಲಭ್ಯ ದೊರೆತರೆ ಮಾತ್ರ, ಬಾಲ ಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಅಲ್ಲದೆ ಈ ಸಾಮಾಜಿಕ ಪಿಡುಗನ್ನು ತೊಲಗಿಸಲು ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯವಿದೆ ಎಂದು ತಿಳಿಸಿದರು.

ಶಾಲೆಗೆ ತೆರಳಿ ಶಿಕ್ಷಣ ಕಲಿಯಬೇಕಾದ ಮಕ್ಕಳನ್ನು ಕೂಲಿ ಕೆಲಸಕ್ಕೆ ಪೋಷಕರು ಕಳುಹಿಸುತ್ತಿದ್ದಾರೆ. ಸಮಾಜದ ಪ್ರಜ್ಞಾವಂತ ನಾಗರಿಕರು, ಇದನ್ನು ಕಂಡು ಕಾಣದಂತೆ ವರ್ತಿಸುವುದು ಸಮಂಜಸವಲ್ಲ. ಈ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ವಿವಿಧ ಇಲಾಖೆಗಳು ಶ್ರಮಿಸುತ್ತಿದ್ದರೂ, ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಬಹಳ ಇದೆ ಎಂದು ಹೇಳಿದರು.

ಬಾಲ ಕಾರ್ಮಿಕ ಪದ್ಧತಿ ದೇಶದಲ್ಲಿ ವ್ಯಾಪಕವಾಗಿ ಬೆಳೆಯಲು ಬಡತನ, ನಿರುದ್ಯೋಗ, ಅನರಕ್ಷತೆ ಪ್ರಮುಖ ಕಾರಣವಾಗಿದೆ. ಅಷ್ಟೇ ಅಲ್ಲದೆ, ಬಾಲ ಕಾರ್ಮಿಕ ಪದ್ಧತಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದೆ. ಪಾಲಕರು ಹಣದಾಸೆಗೆ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸಿ ದೇಶದ ಪ್ರಗತಿಗೆ ಮಾರಕವಾಗುತ್ತಿದ್ದಾರೆ. ಮಕ್ಕಳಿಗೆ ಕೂಲಿ ಕೆಲಸಕ್ಕೆ ಕಳಿಸುವ ಬದಲಾಗಿ ಪುಸ್ತಕ ನೀಡಬೇಕು. ಬಾಲ ಕಾರ್ಮಿಕ ಪದ್ಧತಿಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯುತ್ತೇವೆ. ಇದು ನಿರ್ಮೂಲನೆ ಆಗುವವರೆಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳಿಗೆ ಶ್ರಮ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಇಲಾಖೆಯ ಜಿಲ್ಲಾವಾರು ಅಧಿಕಾರಿಗಳು ಭಾಗಿಯಾಗಿದ್ದರು. ಇದಕ್ಕೂ ಮೊದಲು ನಡೆದ ಜಾಗೃತಿ ಜಾಥಾದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಶ್ರಮಿಸುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಬಾಲ ಕಾರ್ಮಿಕ ಮಕ್ಕಳನ್ನು ಕಂಡಲ್ಲಿ, ಉಚಿತ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಶೋಷಣೆಗೆ ಒಳಗಾದ ಮಕ್ಕಳೇ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ಸುಲಭವಾಗಲಿದೆ.

-ನ್ಯಾ.ಬಿ. ಶಿವಶಂಕರ್ ಅಮರಣ್ಣನವರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News