ಶಿಕ್ಷಕರಿಗೆ ತಾಯಿ ಹೃದಯ ಇರಬೇಕು: ಬೆಂಗಳೂರು ವಿವಿ ಕುಲಸಚಿವ ಬಿ.ಕೆ.ರವಿ

Update: 2019-06-18 18:08 GMT

ಬೆಂಗಳೂರು, ಜೂ.18: ಶಿಕ್ಷಕರಿಗೆ ತಾಯಿ ಹೃದಯ ಇಲ್ಲದಿದ್ದರೆ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸಲು ಸಾದ್ಯವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ ಅಭಿಪ್ರಾಯಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನವಿದೆ. ಇದಕ್ಕೆ ಚ್ಯುತಿ ಬರದಂತೆ ಅತ್ಯಂತ ಜವಾಬ್ದಾರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

50- 60 ರ ದಶಕದಲ್ಲಿ ಶಿಕ್ಷಣ ಕಲಿಯಲು ತುಂಬಾ ಕಷ್ಟ ಪಡಬೇಕಾಗಿತ್ತು. ಎಲ್ಲ ಅಡೆ ತಡೆಗಳನ್ನು ಮೀರಿ ಶಿಕ್ಷಕರಾಗಿದ್ದೇವೆ. ಆದರೆ, ಈಗ ಅಂತಹ ವ್ಯವಸ್ಥೆ ಇಲ್ಲ. ಹೀಗಾಗಿ ಶಿಕ್ಷಕರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುವುದಕ್ಕೆ ಆದ್ಯತೆ ಕೊಡಬೇಕೆಂದು ಅವರು ಹೇಳಿದರು.

ಶಿಕ್ಷಣ ವಿಭಾಗದ ಮುಖ್ಯಸ್ಥೆ ಉಮ್ಮು ಕುಲ್ಸುಮ್ ಮಾತನಾಡಿ, ಆಧುನಿಕತೆ ಬೆಳೆದಂತೆಲ್ಲಾ ಸಾಂಪ್ರದಾಯಿಕ ಶಿಕ್ಷಣ ಬದಲಾಗಿದೆ. ತಾಂತ್ರಿಕ ಯುಗದಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಬೌದ್ಧಿಕವಾಗಿ ಸದೃಢರಾಗಬೇಕಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಶಿಕ್ಷಕನ ಅಂಗೈನಲ್ಲಿರುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಣ ಕಲಿಯುವುದರ ಜತೆಗೆ ತಾಂತ್ರಿಕತೆಯಡೆಗೆ ವಿದ್ಯಾರ್ಥಿಗಳು ದಾಪುಗಾಲಿಡಬೇಕಿದೆ. ಶಿಕ್ಷಕರು ಬೋಧನಾ ವಿಧಾನಗಳನ್ನು ಕಲಿಯುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಿಳುವಳಿಕೆ ಮೂಡಿಸಬಹುದು ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News