ಅಂಗಡಿ ಮಾಲಕನನ್ನು ಅಪಹರಿಸಿ ಕಳವು ಪ್ರಕರಣ: ಮೂವರ ಬಂಧನ

Update: 2019-06-19 13:29 GMT

ಬೆಂಗಳೂರು, ಜೂ.19: ಔಷಧಿ ಅಂಗಡಿ ಮಾಲಕನನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪದಡಿ ಬೆಳ್ಳಂದೂರು ಠಾಣಾ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡಕನ್ನಳ್ಳಿಯ ಅಜಯ್ ಕುಮಾರ್(24), ಜಕ್ಕಸಂದ್ರದ ಶಿವಾನಂದ (25), ಕೋರಮಂಗಲ ವೆಂಕಟಪುರದ ಶ್ರೀಧರ (29) ಹಾಗೂ ಅತ್ತಿಬೆಲೆಯ ರಘುರಾವ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಳೆದ ಜೂ.16 ರಂದು ಕಸವನವಳ್ಳಿಯ ಮುಖ್ಯರಸ್ತೆಯ ಲೈಪ್ ಲೈನ್ ಫಾರ್ಮ, ಮೆಡಿಕಲ್ ಸ್ಟೋರ್ಸ್‌ನ ಮಾಲಕ ಸುಬ್ರಮಣಿ ಎಂಬುವವರ ಬಳಿ ಹೋಗಿ, ನಕಲಿ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದಾಗಿ ಬೆದರಿಸಿ ಆಟೊದಲ್ಲಿ ಅಪಹರಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.

ಬಳಿಕ, ಎಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆ, ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗ ಕರೆದೊಯ್ದು ಹಣ ನೀಡುವಂತೆ ಒತ್ತಾಯಿಸಿ 8 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಉಂಗುರ ಕಸಿದುಕೊಂಡು, ಸುಬ್ರಮಣಿ ಅವರ ಸ್ನೇಹಿತ ಮುನಿರಾಜು ಎಂಬಾತನಿಗೆ ಕರೆ ಮಾಡಿ 15 ಸಾವಿರ ಹಣ ಪಡೆದ ನಂತರ, ಸುಬ್ರಮಣಿ ಅವರನ್ನು ಬಿಟ್ಟು ಕಳುಹಿಸಿದರು ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಚಿನ್ನಾಭರಣ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News