ಸೈಕಲ್ ಟೂರಿಸಂಗೆ ಒತ್ತು: ಸಚಿವ ಎಂ.ಸಿ.ಮನಗೂಳಿ

Update: 2019-06-19 16:28 GMT

ಬೆಂಗಳೂರು, ಜೂ.18: ಪ್ರವಾಸೋದ್ಯಮ ಇಲಾಖೆಯ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಸರಕಾರಕ್ಕೆ ಆದಾಯ ಪಡೆಯುವ ನಿಟ್ಟಿನಲ್ಲಿ ಸೈಕಲ್ ಟೂರಿಸಂಗೆ ಒತ್ತು ನೀಡಲಾಗುವುದು ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ತಿಳಿಸಿದ್ದಾರೆ.

ಕಬ್ಬನ್‌ಪಾರ್ಕ್ ಹಡ್ಸನ್ ಬಳಿ ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿರುವ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಎಲ್ಲ ಉದ್ಯಾನವನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಿ, ಪ್ರವಾಸಿಗರನ್ನು ಆಕರ್ಷಿಸುವತ್ತ ಆದ್ಯತೆ ವಹಿಸಬೇಕಾಗಿದೆ ಎಂದರು.

ಸೈಕಲ್ ಸ್ಟಾಂಡ್ ಉದ್ಘಾಟಿಸಿದ ಅವರು, ಪ್ರವಾಸಿಗರ ಅನುಕೂಲಕ್ಕಾಗಿ ಆ್ಯಪ್ ಮೂಲಕ ಸೈಕಲ್ ಸೇವೆ ಒದಗಿಸಲಾಗುತ್ತಿದೆ. ಪ್ರವಾಸಿಗರು 500ರೂ.ಠೇವಣಿಯೊಂದಿಗೆ ಬಾಡಿಗೆ ಸೈಕಲ್‌ನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ 3ಗಂಟೆಗೆ 50ರೂ.ನಿಗದಿ ಪಡಿಸಲಾಗಿದ್ದು, 6 ಗಂಟೆಗೆ 100ರೂ.ನಿಗದಿ ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಬನ್ ಉದ್ಯಾನವನಕ್ಕೆ ಭೇಟಿ ನೀಡುವ ನೋಂದಾಯಿತ ಸೈಕಲ್ ಸವಾರರಿಗೆ ಪ್ರತಿ 2 ಗಂಟೆಗೆ 20 ರೂ.ದರ ನಿಗದಿ ಪಡಿಸಲಾಗಿದೆ. ಈ ಅವಕಾಶವನ್ನು ಪ್ರವಾಸಿಗರು ಸೂಕ್ತವಾಗಿ ಬಳಸಿಕೊಂಡು ನಗರದ ಸೌಂದರ್ಯವನ್ನು ಸವಿಯಬೇಕು ಎಂದು ಅವರು ಹೇಳಿದರು. ಈ ವೇಳೆ ಮೇಯರ್ ಗಂಗಾಂಬಿಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News