ಕೆಪಿಸಿಸಿಯಲ್ಲಿ ಸಕ್ರಿಯವಾಗಿ ತೊಡಗಿರುವವರಿಗೆ ಅಧಿಕಾರ: ದಿನೇಶ್‌ಗುಂಡೂರಾವ್

Update: 2019-06-19 16:34 GMT

ಬೆಂಗಳೂರು, ಜೂ.19: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನವನ್ನು ಹೊರತುಪಡಿಸಿ, ಉಳಿದ ಪದಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ವಿಸರ್ಜಿಸಿ ಎಐಸಿಸಿ ಆದೇಶಿಸಿದೆ.

ಬುಧವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಇಂತಹ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಕೆಪಿಸಿಸಿ ಚುನಾವಣಾ ಸಮಿತಿ, ಚುನಾವಣಾ ಪ್ರಚಾರ ಸಮಿತಿ, ಕೆಪಿಸಿಸಿ ಸಮನ್ವಯ ಸಮಿತಿ, ಕಾರ್ಯಕಾರಣಿ ಸಮಿತಿ, ಸಾಮಾಜಿಕ ಜಾಲತಾಣ ಸಮಿತಿ ಸೇರಿದಂತೆ ಸುಮಾರು 310ಕ್ಕೂ ಹೆಚ್ಚು ಪದಾಧಿಕಾರಿಗಳ ಬದಲಾವಣೆ ಮಾಡಲಾಗುತ್ತಿದ್ದು, ಹಂತ, ಹಂತವಾಗಿ ಬದಲಾವಣೆಯ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೆಪಿಸಿಸಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ಹಸುತ್ತಿದ್ದ ಡಾ.ಬಿ.ಎಲ್.ಶಂಕರ್, ಪ್ರೊ.ಬಿ.ಕೆ.ಚಂದ್ರಶೇಖರ್, ಮೋಟಮ್ಮ, ಸುದರ್ಶನ್, ಎಲ್.ಹನುಮಂತಯ್ಯ ಸೇರಿದಂತೆ ಹಲವು ನಾಯಕರಿಂದ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕರನ್ನು ಗುರುತಿಸಿ ನೇಮಿಸಲು ಚಿಂತನೆ ನಡೆಸಲಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಕುರಿತು ವಿಶ್ವಾಸ ಮೂಡಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರೊಂದಿಗೆ ಹಾಗೂ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ನಾಯಕರನ್ನು ಗುರುತಿಸಿ, ಅಧಿಕಾರ ವಹಿಸುವ ನಿಟ್ಟಿನಲ್ಲಿ ಎಐಸಿಸಿ ಕಾರ್ಯಮಗ್ನವಾಗಿದೆ. ಆ ನಿಟ್ಟಿನಲ್ಲಿ ಕೆಪಿಸಿಸಿಯಲ್ಲಿ ಸಕ್ರಿಯವಾಗಿದ್ದು, ಅಧಿಕಾರ ವಂಚಿತ ನಾಯಕರನ್ನು ಗುರುತಿಸುವ ಕಾರ್ಯವಾಗುತ್ತಿದೆ ಎಂದು ಅವರು ಹೇಳಿದರು.

ಸಂಸದ ಎಲ್.ಹನುಮಂತಯ್ಯ ಮಾತನಾಡಿ, ಲೋಕಸಭಾ ಚುನಾವಣೆಯ ಬಳಿಕ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸುವುದರ ಕುರಿತು ಚಿಂತನೆ ನಡೆದಿತ್ತು. ಈಗ ಎಐಸಿಸಿ ಸೂಕ್ತವಾದ ನಿರ್ಧಾರವನ್ನು ಕೈಗೊಂಡಿದೆ. ತಳಮಟ್ಟದಲ್ಲಿ ಕಾಂಗ್ರೆಸ್‌ನ್ನು ಸಂಘಟಿಸುವ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅಧಿಕಾರ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿರುವ ಎಐಸಿಸಿ, ಕೆಪಿಸಿಸಿಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತು ನೀಡಿದೆ. ಮುಂದಿನ ದಿನಗಳಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಗಳು ಬದಲಾವಣೆ ಆದರೆ ಅಚ್ಚರಿ ಪಡಬೇಕಿಲ್ಲ.

-ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News