ಕೆಎಎಸ್ ಅಧಿಕಾರಿ ಅಮಾನತಿಗೆ ಆದೇಶಿಸಿದ ಹೈಕೋರ್ಟ್

Update: 2019-06-19 17:03 GMT

ಬೆಂಗಳೂರು, ಜೂ.19: ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಮಹೇಶ್‌ಬಾಬು ಅವರನ್ನು ಅಮಾನತು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಚ್.ಎನ್.ಸತ್ಯನಾರಾಯಣ ಅವರಿದ್ದ ನ್ಯಾಯಪೀಠ, ಅಮಾನತು ಮಾಡುವಂತೆ ಕಂದಾಯ ಇಲಾಖೆಗೆ ಆದೇಶಿಸಿದೆ.

1989ರಲ್ಲಿ ಸರಕಾರ ಹನುಮಂತರಾವ್ ಸೇರಿ ಮೂವರಿಗೆ ಭೂ ಮಂಜೂರು ಮಾಡಿತ್ತು. ನೆಲಮಂಗಲದ ಗೊಲ್ಲಹಳ್ಳಿಯಲ್ಲಿ ಮೂವರ ಹೆಸರಿಗೆ ತಲಾ 2.17 ಗುಂಟೆ, 25 ಗುಂಟೆಯಂತೆ ಜಮೀನು ಮಂಜೂರು ಮಾಡಿ ಎಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ, ಮಧ್ಯದಲ್ಲಿ ರಾಜ್ಯ ಸರಕಾರ ತಾನು ಮಾಡಿದ್ದ ಭೂ ಮಂಜೂರಾತಿಯನ್ನು ರದ್ದುಗೊಳಿಸಿತ್ತು. ಸರಕಾರದ ಕ್ರಮ ಪ್ರಶ್ನಿಸಿ ಹನುಮಂತರಾವ್ ಎಂಬುವವರು ಭೂ ನ್ಯಾಯಮಂಡಳಿಯಲ್ಲಿ ದಾವೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಭೂ ನ್ಯಾಯಮಂಡಳಿ ಪುನಃ ಮರು ಮಂಜೂರು ಮಾಡಿ ಎಂದು ಆದೇಶಿಸಿತ್ತು. 2.17 ಎಕರೆ ಮತ್ತು 32 ಗುಂಟೆ, 25 ಗುಂಟೆ ಜಮೀನನ್ನು ದಾಖಲೆಗಳಲ್ಲಿ ಕೇವಲ ಇಬ್ಬರ ಹೆಸರನ್ನು ನಮೂದಿಸಿ ಕೆಎಎಸ್ ಅಧಿಕಾರಿ ಮಹೇಶ್‌ಬಾಬು ಆದೇಶ ಮಾಡಿದ್ದರು. ಹೆಚ್ಚು ಪಾಲುದಾರಿಕೆ ಹೊಂದಿದ್ದ ಹನುಮಂತರಾವ್ ಹೆಸರನ್ನು ಕೈಬಿಟ್ಟು ಆದೇಶಿಸಿದ್ದರು. 2018ರಲ್ಲಿ ಹೆಸರನ್ನು ದಾಖಲೆಗಳಿಂದ ಕೈಬಿಟ್ಟು ಮಹೇಶ್‌ಬಾಬು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹನುಮಂತರಾವ್ ಹೈಕೋರ್ಟ್ ಮೆಟ್ಟಿಲೇರಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ವಿಚಾರಣೆ ನಡೆಸಿದ ನ್ಯಾಯಪೀಠವು ನೆಲಮಂಗಲದ ತಹಶೀಲ್ದಾರ್ ಆಗಿದ್ದ ಮಹೇಶ್‌ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಾರಣೆ ಬಳಿಕ ಮಹೇಶ್‌ಬಾಬು ಕರ್ತವ್ಯ ಲೋಪವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡುವಂತೆ ಕಂದಾಯ ಇಲಾಖೆಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News