ಜನಪ್ರತಿನಿಧಿಗಳು ಪಾರದರ್ಶಕತೆ ಅಳವಡಿಸಿಕೊಳ್ಳುವ ಅಗತ್ಯವಿದೆ: ಎಸ್.ಎಂ.ಕೃಷ್ಣ

Update: 2019-06-19 17:57 GMT

ಬೆಂಗಳೂರು, ಜೂ.19: ರಾಷ್ಟ್ರದ ಹಿತದೃಷ್ಟಿಯಿಂದ ಅಧಿಕಾರದಲ್ಲಿರುವವರು ಮನೆಯ ಒಳಗೆ ಹಾಗೂ ಹೊರಗೆ ಪಾರದರ್ಶಕತೆ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಿಸಿದ್ದಾರೆ.

ಬುಧವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯರ ಅಧಿಕಾರದ ಅವಧಿಯಲ್ಲಿ ರಾಜಕಾರಣಿಗಳಿಗೆ ಇದ್ದ ಬದ್ಧತೆ ಇಂದಿನವರಿಗೆ ಇಲ್ಲದಾಗಿದೆ. ಇಂದಿನ ಜನಪ್ರತಿನಿಧಿಗಳಲ್ಲಿ ಪಾರದರ್ಶಕತೆಯ ಕೊರತೆ ಕಾಣುತ್ತಿದೆ ಎಂದರು. ದೇಶದ ರಾಜಕೀಯದಲ್ಲಿ ಕೆಂಗಲ್ ಹನುಮಂತಯ್ಯ ಯಶಸ್ವಿ ಆಡಳಿತಗಾರರಾಗಿದ್ದಾರೆ. ಅವರು ಕೇಂದ್ರದಲ್ಲಿ 1971 ರಲ್ಲಿ ರೈಲ್ವೆ ಇಲಾಖೆಯ ಕ್ಯಾಬಿನೆಟ್ ಮಂತ್ರಿಯಾಗಿದ್ದ ಸಂದರ್ಭದಲ್ಲಿ ತೋರಿದ ಮುತ್ಸದ್ದಿತನ, ಧೈರ್ಯ ಬೇರೆ ಯಾರೂ ತೋರಲಾಗದು. ಹಲವಾರು ಅವಕಾಶಗಳು ಹುಡುಕಿಕೊಂಡು ಬಂದರೂ ಎಲ್ಲವನ್ನೂ ನಿರಾಕರಿಸಿದರು. ಹಿಡಿದ ಹಠ ಬಿಟ್ಟವರಲ್ಲ. ಕಡು ನಿಷ್ಠುರವಾದಿಯಾಗಿದ್ದ ಕೆಂಗಲ್ ಹನುಮಂತಯ್ಯ, ನೇರವಾಗಿ ಮಾತನಾಡುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ನುಡಿದರು.

ಕೆಂಗಲ್ ಹನುಮಂತಯ್ಯ ನಿಷ್ಠುರವಾಗಿದ್ದರು, ಶಿಸ್ತನ್ನು ಮುರಿದರೆ ಎಲ್ಲಿಯೂ ಅದನ್ನು ಸಹಿಸುತ್ತಿರಲಿಲ್ಲ. ನಾವು ನಿಷ್ಪಕ್ಷಪಾತವಾಗಿರಬೇಕು. ಕಾನೂನಿನ ಚೌಕಟ್ಟಿನೊಳಗೆ ತೀರ್ಮಾನಗಳು ಮಾಡಬೇಕು ಎನ್ನುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆಗೆ ಎಲ್ಲ ಸಚಿವರು ವಿಧಾನಸೌಧದಕ್ಕೆ ಬರುತ್ತಿದ್ದರು. ಆದರೆ, ಈಗ ಯಾವ ಸಚಿವರು ಎಲ್ಲಿದ್ದಾರೆಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಮಾಡುವ ಕೆಲಸ ವಿಧಾನಸೌಧದಲ್ಲಿ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು. ಒಬ್ಬ ಮಂತ್ರಿಯಾದ ಮೇಲೆ ಒಂದು ಶಾಖೆಯ ಮೇಲೆ ಸಂಪೂರ್ಣ ಹಿಡಿತ ಇರಬೇಕು. ನಾನು ಸಿಎಂ ಆಗಿದ್ದ ವೇಳೆ ತುರ್ತಾಗಿ ಬಿಜಾಪುರಕ್ಕೆ ಹೋಗಬೇಕಿತ್ತು. ಅಲ್ಲಿನ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಆದರೂ, ಅಲ್ಲಿನ ಪ್ರಾಂತೀಯ ಆಯುಕ್ತರು ಬೆಂಗಳೂರಿಗೆ ತೆರಳಿದ್ದರು. ಕೂಡಲೇ ಹಿಂದುರಿಗಿದ ದಿನವೇ ಅವರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದೆ. ಈ ಸಂಬಂಧ ಹಿರಿಯ ಅಧಿಕಾರಿಗಳು ಬಂದು ಚರ್ಚಿಸಿದರೂ, ನನ್ನ ಆದೇಶ ಸಡಿಸಲಿಲ್ಲ. ಇಂತಹ ಪಾಠವನ್ನು ಕಲಿತದ್ದು ಕೆಂಗಲ್ ಹನುಮಂತಯ್ಯರವರಿಂದ ಎಂದು ನೆನಪಿಸಿಕೊಂಡರು.

ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಎಸ್.ಎಂ.ಕೃಷ್ಣಗೆ ಎಲ್ಲ ಸಾಹಿತಿಗಳೊಂದಿಗೂ ಉತ್ತಮವಾದ ಸಂಬಂಧವಿತ್ತು. ಅನೇಕ ಸಲ ಅವರ ಬಳಿಗೆ ಕೆಲವು ಬೇಡಿಕೆಗಳನ್ನು ತೆಗೆದುಕೊಂಡು ಹೋದಾಗ ಶಾಂತವಾಗಿ ಕೇಳಿಸಿಕೊಳ್ಳುತ್ತಿದ್ದರು. ಅಲ್ಲದೆ, ಕನ್ನಡದ ಬಗೆಗಿನ ಬೇಡಿಕೆಗಳನ್ನು ಕಾರ್ಯರೂಪಕ್ಕೆ ಬರಬೇಕು ಎಂದು ಸೂಚನೆ ನೀಡುತ್ತಿದ್ದರು ಎಂದು ನುಡಿದರು.

ಬೆಂಗಳೂರು ನಗರ ಇಂದು ಭವ್ಯವಾದ ನಗರವಾಗಿ ನಿರ್ಮಾಣಗೊಳ್ಳುವಲ್ಲಿ ಕೃಷ್ಣ ಅವರ ಪಾತ್ರವೂ ಇದೆ. ಸಣ್ಣ ವಯಸ್ಸಿನಲ್ಲಿ ಅತ್ಯಂತ ಪ್ರಜ್ಞಾಪೂರ್ವಕವಾಗಿ ಯೋಚನೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದರು. ಎಸ್.ಎಂ.ಕೃಷ್ಣರ ಆಡಳಿತ ಯಾವುದಕ್ಕೂ ಕಡಿಮೆಯಿಲ್ಲ. ಒಬ್ಬ ಧೀಮಂತ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಉಪಸ್ಥಿತರಿದ್ದರು.

ಕರ್ನಾಟಕ ಏಕೀಕರಣ ಮಾಡಿದರೆ ಸಿಎಂ ಕುರ್ಚಿ ತಪ್ಪುತ್ತದೆ ಎಂದು ತಿಳಿದಿದ್ದರೂ ರಾಜ್ಯದ ಹಿತಕ್ಕಾಗಿ, ಕನ್ನಡದ ಉಳಿವಿಗಾಗಿ ಅಂದು ಅವರು ಏಕೀಕರಣದ ಪರವಾಗಿದ್ದರು. ಹನುಮಂತಯ್ಯ ದೇಶ ಕಂಡ ಅತ್ಯಂತ ಭವ್ಯವಾದ ವಿಧಾನಸೌಧದ ಕಟ್ಟಿಸಿದರು. ಆದರೆ, ಅವರ ವಿರುದ್ಧವೇ ತನಿಖಾ ಸಮಿತಿ ಹಾಕಲಾಗಿತ್ತು. ಆ ಸಮಿತಿ ವರದಿ ಸಲ್ಲಿಸಿದ್ದು, ಚರ್ಚೆ ನಡೆಯುತ್ತಿದ್ದ ವೇಳೆ ಹನುಮಂತಯ್ಯ, ಭವ್ಯವಾದ ಸೌಧ ಕಟ್ಟಿದ್ದೇನೆ. ಅದನ್ನು ನೋಡಲು ಎಲ್ಲಿಂದಲೋ ಬರುತ್ತಾರೆ. ಆದರೆ, ಇದೇ ಸೌಧದಲ್ಲಿ ನಿಂತು ನಾನು ನಿರಪರಾಧಿ ಎಂದು ಹೇಳಿಕೊಳ್ಳಬೇಕಾದ ದುರ್ಗತಿ ಬಂದಿದೆ ಎಂದಾಗ ನನ್ನ ಕಣ್ಣಲ್ಲಿ ಕಣ್ಣೀರು ಬಂದಿತು.

-ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News