ಪೊಲೀಸರಿಂದ ಉದ್ದೇಶಪೂರ್ವಕ ಗುಂಡಿನ ದಾಳಿ: ಹ್ಯೂಮನ್ ರೈಟ್ಸ್ ಸಂಸ್ಥೆ ಖಂಡನೆ

Update: 2019-06-19 18:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.19: ರಾಜಧಾನಿಯಲ್ಲಿ ಇತ್ತೀಚೆಗೆ ‘ಲಾ ಬ್ರೇಕರ್ಸ್’ಗಳ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಸೌಥ್ ಇಂಡಿಯಾ ಸೆಲ್ ಫಾರ್ ಹ್ಯೂಮನ್ ರೈಟ್ಸ್ ಎಜುಕೇಶನ್ ಅಂಡ್ ಮಾನಿಟರಿಂಗ್ ಸಂಸ್ಥೆ ಆರೋಪಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮ್ಯಾಥ್ಯೂಸ್ ಫಿಲಿಪ್, ಬೆಂಗಳೂರಿನ ಪೊಲೀಸರು ‘ಟ್ರಿಗರ್ ಹ್ಯಾಪಿ’ (ಗುಂಡು ಹಾರಿಸುವುದರಿಂದ ಖುಷಿ ಪಡುವ) ಸ್ಥಿತಿಗೆ ತಲುಪಿದ್ದಾರೆ. ಕಳೆದ ವರ್ಷ 14 ಜನರ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ವರ್ಷ 6 ಜನರ ಕಾಲಿಗೆ ಗುಂಡು ಹಾರಿಸಲಾಗಿದೆ. ಎಲ್ಲ ಗುಂಡಿನ ದಾಳಿಗಳನ್ನೂ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿಯೇ ಮಾಡಿದರು ಎಂದು ಹೇಳುವುದು ಸರಿಯಾದುದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದೇಶದ ಉಳಿದ ರಾಜ್ಯಗಳಲ್ಲೂ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಬೇರೆ ನಗರಗಳಲ್ಲಿ ಈ ಪ್ರಮಾಣದ ಶೂಟೌಟ್ ಪ್ರಕರಣಗಳು ದಾಖಲಾಗುತ್ತಿಲ್ಲ. ಬಂಧನಕ್ಕೆ ಒಳಗಾಗಲು ವಿರೋಧಿಸುವ ಅಪರಾಧಿಗಳನ್ನು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗುವವರಿಂದ ರಕ್ಷಣೆಗಾಗಿ ಗುಂಡು ಹಾರಿಸುವುದರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ. ಅದನ್ನು ಪೊಲೀಸರು ಅವರ ಆತ್ಮರಕ್ಷಣೆಗಾಗಿಯೇ ಮಾಡಿದರು ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರು ಇತ್ತೀಚಿನ ದಿನಗಳಲ್ಲಿ ಈ ರೀತಿ ಶೂಟೌಟ್ ನಡೆಯುತ್ತಿರುವುದರ ಹಿಂದೆ ಸರಕಾರದ ಕುಮ್ಮಕ್ಕು ಇದೆ ಎನ್ನುವ ಅನುಮಾನ ಮಾಡುತ್ತಿದೆ. ನಗರದಲ್ಲಿ ನಡೆದಿರುವ ಶೂಟೌಟ್‌ಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮಾನವ ಹಕ್ಕುಗಳ ಆಯೋಗ ಇಂತಹ ವಿಷಯಗಳ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿ ನಡೆಸಿ, ಮಾರ್ಗಸೂಚಿಗಳನ್ನು ನೀಡಬೇಕು. ಹಿಂಸೆ ಮತ್ತು ಅಪರಾಧವನ್ನು ತಡೆಯುವುದಕ್ಕೆ ಅದೇ ಮಾರ್ಗವನ್ನು ಅನುಸರಿಸುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News