ಬೂಟಾಟಿಕೆಯ ಕ್ರಮಗಳು

Update: 2019-06-19 18:29 GMT

ಜೂನ್ ತಿಂಗಳು ಬಂತೆಂದರೆ ದಿಲ್ಲಿಯು ಧೂಳಿನ ಮಾರುತವನ್ನು ಎದುರಿಸುವುದು ಖಂಡಿತ. ಆದರೆ ಅರ್ಧ ಶತಮಾನದಷ್ಟು ಹಿಂದೆಯೇ ತಣ್ಣಗಾಗಿಸಿದ್ದ ಮಾರುತವೊಂದು ಈ ಬಾರಿ ಮತ್ತೆ ಒಂದಷ್ಟು ಧೂಳೆಬ್ಬಿಸಿದೆ. ಒಂದು ಸುದೀರ್ಘ ಚುನಾವಣಾ ಪ್ರಕ್ರಿಯೆಯ ನಂತರ ಎದುರಾದ ಫಲಿತಾಂಶವನ್ನು ಹೇಗೆ ಪರಿಗಣಿಸಬೇಕೆಂದು ದೇಶವು ಗಡಿಬಿಡಿಯಲ್ಲಿರುವಾಗ ಹೊಸ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಸಕಾರಾತ್ಮಕ ಉಲ್ಲೇಖಗಳಿರುವುದರ ಕುರಿತು ವಿವಾದವೊಂದು ತಲೆದೋರಿದೆ.

ಆ ಪ್ರಸ್ತಾಪಿತ ತ್ರಿಭಾಷಾ ಸೂತ್ರದಲ್ಲಿ ಹಿಂದಿಯನ್ನು ಉಲ್ಲೇಖಿಸಿರುವ ಬಗ್ಗೆ ತಮಿಳುನಾಡಿನಿಂದ ತೀವ್ರ ಆಕ್ಷೇಪಣೆಗಳು ಎದುರಾದೊಡನೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಆನ್‌ಲೈನಿನ ಕರಡು ನೀತಿಯಲ್ಲಿದ್ದ ಸಂಬಂಧಿತ ಪ್ಯಾರಾವನ್ನು ಹಿಂದೆೆಗೆದುಕೊಂಡು ಬೇರೊಂದು ಪ್ಯಾರಾವನ್ನು ಸೇರಿಸಿದೆ. ಹೀಗಾಗಿ ಹೊಸ ಪೀಳಿಗೆಯ ಓದುಗರಿಗೆ ಗತದಲ್ಲಿ ಭುಗಿಲೆದ್ದ ಈ ಆಡಳಿತಾತ್ಮಕ ವಿಷಯವು ಏನೆಂಬುದನ್ನೂ ಮತ್ತು ಈಗಲೂ ಕೂಡ ಏಕೆ ತ್ರಿಭಾಷಾ ಸೂತ್ರ ಜೀವಂತವಾಗಿದೆಯೆಂದು ತಿಳಿಸುವ ಅಗತ್ಯವಿದೆ. ಕೆಲವೊಮ್ಮೆ ಚರ್ಚೆಗಾಗಿ ಮುಂದಿಡುವ ಇಂದಿನ ದಸ್ತಾವೇಜುಗಳಿಗಿಂತ ಹಳೆಯ ದಸ್ತಾವೇಜುಗಳೇ ಹೆಚ್ಚು ಸಮಕಾಲೀನ ಹಾಗೂ ಹೊಸತೆಂದು ಅನಿಸಿಬಿಡುತ್ತದೆ.

ಕೇಂದ್ರದಲ್ಲಿ ಸರಕಾರವು ಮತ್ತೊಮ್ಮೆ ಅಧಿಕಾರವನ್ನು ನವೀಕರಿಸಿಕೊಂಡ ಒಂದು ವಾರದೊಳಗೆ ಸಾರ್ವಜನಿಕರ ಗಮನವನ್ನು ಸೆಳೆದ ಈ ತ್ರಿಭಾಷಾ ಸೂತ್ರವು ಮೊದಲು ಡಿ.ಎಸ್. ಕೊಠಾರಿ ಅವರ ನೇತೃತ್ವದಲ್ಲಿ (1964-66) ರಚಿಸಲಾಗಿದ್ದ ಶಿಕ್ಷಣ ಆಯೋಗದಲ್ಲಿ ಪ್ರಸ್ತಾಪಿತವಾಗಿತ್ತು. ಆ ಬೃಹತ್ ವರದಿಯ ಕರಡನ್ನು ಬರೆದ ಕೊಠಾರಿ ಸಮಿತಿಯ ಸದಸ್ಯ-ಕಾರ್ಯದರ್ಶಿ ಜೆ.ಪಿ. ನಾಯ್ಕಾರಿಗೆ ಭಾರತದ ವಿವಿಧ ಪ್ರದೇಶಗಳಲ್ಲಿ ಮತ್ತು ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಳವಾದ ಪರಿಚಯವಿತ್ತು. ಆ ಆಯೋಗದ ಪ್ರಕಾರ 1956ರಲ್ಲಿ ಸೆಂಟ್ರಲ್‌ಅಡ್ವೈಸರಿ ಬೋರ್ಡ್ ಆಫ್ ಎಜುಕೇಷನ್-ಕೇಂದ್ರೀಯ ಶೈಕ್ಷಣಿಕ ಸಲಹಾ ಸಮಿತಿ (ಸಿಎಬಿಇ)ಯು ತ್ರಿಭಾಷಾ ಸೂತ್ರವನ್ನು ರೂಪಿಸಿತ್ತು ಮತ್ತು ಅದರ ಒಂದು ಸರಳೀಕೃತ ರೂಪವನ್ನು 1961ರಲ್ಲಿ ನಡೆದ ಮುಖ್ಯಮಂತ್ರಿಗಳ ಸಮ್ಮೇಳನವು ಅನುಮೋದಿಸಿತು.

ಆದರೆ ‘‘ಅದರ ಅನುಷ್ಠಾನಕ್ಕೆ ಸಂಬಂಧಿಸಿದ ಸಂಗತಿಗಳು ಮಾತ್ರ ಶೈಕ್ಷಣಿಕಕ್ಕಿಂತ ಜಾಸ್ತಿ ರಾಜಕಿಯ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಪಟ್ಟಿತ್ತು’’ ಎಂದು ಕೊಠಾರಿ ಆಯೋಗವು ಹೇಳುತ್ತದೆ. ಕೊಠಾರಿ ಆಯೋಗದಲ್ಲಿ ಭಾಷೆಯ ಬಗ್ಗೆ ಇರುವ ವಿಸ್ತೃತವಾದ ಅಧ್ಯಾಯವು ಅಂದು ಶೈಕ್ಷಣಿಕ ವಿಷಯಗಳು ರಾಜಕೀಯ ಅನಿವಾರ್ಯತೆಗಳೊಂದಿಗೆ ನಡೆಸಿದ ಸಂಘರ್ಷದ ಪುರಾವೆಯಾಗಿದೆ. ‘‘ಆಚರಣೆಯಲ್ಲಿ ತ್ರಿಭಾಷಾ ಸೂತ್ರದ ಅನುಷ್ಠಾನಕ್ಕೆ ಹಲವು ಸಮಸ್ಯೆಗಳು ಎದುರಾಗಿವೆ ಮತ್ತು ಅದರ ಅನುಷ್ಠಾನ ಅಷ್ಟಾಗಿ ಯಶಸ್ವಿಯಾಗಿಲ್ಲ. ಇದರ ಹಿಂದೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಶಾಲಾ ಶಿಕ್ಷಣ ಹಂತದಲ್ಲಿ ಭಾಷಾ ಶಿಕ್ಷಣದ ಬಗೆ ಅತಿಯಾದ ಹೊರೆಯನ್ನು ಹೊರಿಸುವ ಬಗ್ಗೆ ಇದ್ದ ಸಾಧಾರಣ ಪ್ರತಿರೋಧ; ಹಿಂದಿ ಪ್ರದೇಶಗಳಲ್ಲಿ ಮತ್ತೊಂದು ಆಧುನಿಕ ಭಾರತೀಯ ಭಾಷೆಯನ್ನು ಕಲಿಯುವುದರ ಬಗ್ಗೆ ಇರುವ ನಿರಾಸಕ್ತಿ; ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಕಲಿಯುವುದರ ಬಗ್ಗೆ ಇದ್ದ ವ್ಯಾಪಕ ವಿರೋಧ; ಮತ್ತು ಆರನೇ ತರಗತಿಯಿಂದ ಮೊದಲುಗೊಂಡು ಹತ್ತು ಅಥವಾ ಹನ್ನೆರಡನೇ ತರಗತಿಯವರೆಗೆ ಎರಡನೇ ಮತ್ತು ಮೂರನೇ ಭಾಷೆ ಕಲಿಸಲು ತಗಲುವ ವೆಚ್ಚ ಮತ್ತು ತ್ರಾಸದಾಯಕ ಪ್ರಯತ್ನಗಳು... ಮುಖ್ಯವಾಗಿದ್ದವು.

ಇನ್ನು ಮೂರನೇ ಭಾಷೆಯ ಬಗ್ಗೆ ಹೇಳುವುದಾದರೆ ಅದನ್ನು ವಿದ್ಯಾರ್ಥಿಗಳು ಅತ್ಯಂತ ಅವಾಸ್ತವಿಕ ವಾತಾವರಣದಲ್ಲಿ ಕಲಿಯಬೇಕಾದ ಸಂದರ್ಭವಿದ್ದಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಅದರಿಂದ ಹೆಚ್ಚೇನನ್ನು ಪಡೆದುಕೊಳ್ಳಲಾಗಲಿಲ್ಲ’’ (ಪು.333, ಪ್ಯಾ.8.32) ಎಂದು ಕೊಠಾರಿ ವರದಿಯು ಹೇಳುತ್ತದೆ. ತಮ್ಮೆದುರು ಇದ್ದ ಹಲವಾರು ಆಯ್ಕೆಗಳ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಿದ ನಂತರ ಹಾಗೂ ತನ್ನ ಒಬ್ಬ ಸದಸ್ಯರ ಭಿನ್ನಮತವನ್ನು ದಾಖಲಿಸುತ್ತಾ ಕೊಠಾರಿ ಸಮಿತಿ ಈ ವಿಷಯದ ಬಗ್ಗೆ ಅಂತಿಮವಾಗಿ ಹೀಗೆ ಹೇಳುತ್ತದೆ: ‘‘ಪ್ರಾಥಮಿಕ ಹಂತದಲ್ಲೇ ಮೂರು ಭಾಷೆಗಳ ಕಲಿಕೆಯನ್ನು ಜಾರಿಗೊಳಿಸುವುದರಿಂದ ಮಗುವು ತನ್ನ ಮಾತೃಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಗಣನೀಯವಾಗಿ ಅಡ್ಡಿಯಾಗುವುದಲ್ಲದೆ ಮಗುವಿನ ಬೌದ್ಧಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆಂದು ನಾವು ಭಾವಿಸುತ್ತೇವೆ...ಆದ್ದರಿಂದ ಸದ್ಯದ ಭವಿಷ್ಯದಲ್ಲಿ ಮಗುವು ತನ್ನ ಭಾಷೆಯನ್ನು ಕಲಿಯಲು ಅತಿ ಹೆಚ್ಚು ಗಮನವನ್ನು ನೀಡುತ್ತಾ ಹೆಚ್ಚುವರಿ ಭಾಷೆಗಳ ಕಲಿಕೆಯನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸುವುದು ಒಳಿತು’’ (ಪು.340, ಪ್ಯಾ.8.41).

ಈಗ 21ನೇ ಶತಮಾನದ ಎರಡನೇ ದಶಕದ ಅಂಚಿನಲ್ಲಿರುವ ಸದ್ಯದ ವರ್ತಮಾನಕ್ಕೆ ವಾಪಸ್ ಬಂದು ಶಿಕ್ಷಣ ಆಯೋಗದ ದೃಷ್ಟಿಕೋನದಿಂದ ಸಂದರ್ಭವನ್ನು ನೋಡಿದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ಕೊಠಾರಿ ಮತ್ತು ಜೆಪಿ ನಾಯ್ಕೆರವರು ಊಹಿಸದ ಮತ್ತು ಬಯಸದ ರೀತಿಯಲ್ಲಿ ಹಾಗೂ ಗುರುತು ಕೂಡಾ ಪತ್ತೆಯಾಗದಂತೆ ಬದಲಾಗಿದೆ. ಸರಕಾರಿ ಶಾಲೆಗಳ ಬಗ್ಗೆ ಅಪಾರ ತಿರಸ್ಕಾರ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಬಗ್ಗೆ ವ್ಯಾಮೋಹವನ್ನು ಬೆಳೆಸಿಕೊಂಡಿರುವ ಪೋಷಕರ ಮನೋಭಾವವನ್ನು ಬಂಡವಾಳ ಮಾಡಿಕೊಂಡು ಹುಲುಸಾಗಿ ಬೆಳೆಯುತ್ತಿರುವ ಖಾಸಗಿ ಶಿಕ್ಷಣ ಕ್ಷೇತ್ರ, ಶಾಲೆಗಳಲ್ಲಿ ಉಪಾಧ್ಯಾಯರ ತೀವ್ರ ಕೊರತೆ ಮತ್ತು ಉಪಾಧ್ಯಾಯರನ್ನು ನೇಮಿಸುವಲ್ಲಿ ಸರಕಾರದ ಸಾಂಸ್ಥಿಕ ಅಸಹಾಯಕತೆ ಮತ್ತು ಶಿಕ್ಷಕ ತರಬೇತಿಯ ವಿಸ್ತೃತ ವಾಣಿಜ್ಯೀಕರಣ..ಇತ್ಯಾದಿ ಬೆಳವಣಿಗೆಗಳನ್ನು ನೋಡಿ ಪ್ರಾಯಶಃ ಕೊಠಾರಿ, ಜೆಪಿ ನಾಯ್ಕಾ ಮತ್ತು ಶಿಕ್ಷಣ ಆಯೋಗದಲ್ಲಿದ್ದ ಅವರ ಇನ್ನಿತರ ಸಹೋದ್ಯೋಗಿಗಳು ಆಘಾತಕ್ಕೊಳಗಾಗುತ್ತಿದ್ದರು. ಹಾಗೆಯೇ ಶಿಕ್ಷಣ ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ಯೋಜನಾಬದ್ಧ ಬೆಳವಣಿಗೆಯೆಂಬುದೇ ಎಷ್ಟು ಅಪ್ರಸ್ತುತವಾಗಿಬಿಟ್ಟಿದೆ ಎಂಬುದನ್ನು ಕಾಣುತ್ತಿದ್ದರು. ಅವರ ಪ್ರಭುತ್ವ ಕೇಂದ್ರಿತ ಚೌಕಟ್ಟಿನ ಪ್ರಸ್ತಾಪಗಳಲ್ಲಿ ರಾಜಕೀಯ ಅನಿವಾರ್ಯತೆಗಳನ್ನು ಒಪ್ಪಿಕೊಳ್ಳಬೇಕಿತ್ತು ಮತ್ತು ಅವುಗಳೊಡನೆ ಅನುಸಂಧಾನ ನಡೆಸಬೇಕಿತ್ತು.

ಆದರೆ ಆಗ ಮಾರುಕಟ್ಟೆ ಅನಿವಾರ್ಯತೆಗಳು ನಗಣ್ಯವಾಗಿದ್ದವು. ಆದರೆ ಈಗ ಪರಿಸ್ಥಿತಿ ತಿರುವುಮುರುವಾಗಿದೆ. ಈಗ ಮಾರುಕಟ್ಟೆ ಒತ್ತಡಗಳು ಕೇಂದ್ರಸ್ಥಾನವನ್ನು ಆಕ್ರಮಿಸಿಕೊಂಡಿದ್ದು ರಾಜಕೀಯ ಅನಿವಾರ್ಯತೆಗಳು ಕೇವಲ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ತುರ್ತಿನಲ್ಲಿ ಮಾಡುವ ತೋರಿಕೆಯ ಪ್ರದರ್ಶನಗಳಾಗಿಬಿಟ್ಟಿವೆ. ಹಿಂದಿ ಕಲಿಕಾ ಉತ್ತೇಜನದ ಸಂಗತಿಯೂ ಸಹ ಯಾವುದೇ ಸಾರವಿಲ್ಲದ ತೋರಿಕೆಯ ವಿಷಯವಷ್ಟೇ ಆಗಿದೆ. ಕರಡು ಶಿಕ್ಷಣ ನೀತಿಯಲ್ಲಿರುವ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಕಲಿಕೆಯನ್ನು ಪ್ರಸ್ತಾಪಿಸುವ ಮೂಲಕ ಸರಕಾರವು ಹಳೆಯ ಮಾದರಿ ರಾಷ್ಟ್ರವಾದಕ್ಕೆ ಬದ್ಧರಾಗಿರುವ ಬಗ್ಗೆ ಬಾಯಿಮಾತಿನ ಬದ್ಧತೆಯನ್ನಷ್ಟೇ ತೋರಿದೆ. ಊಹಿಸಬಹುದಾದ ಮೂಲಗಳಿಂದಲೇ ಅದಕ್ಕೆ ವಿರೋಧ ವ್ಯಕ್ತವಾದ ಕೂಡಲೇ ಹಿಂದಿಯನ್ನು ಹೇರಿಕೆ ಮಾಡುವ ಯಾವ ಉದ್ದೇಶವೂ ಸರಕಾರಕ್ಕಿಲ್ಲವೆಂದು ಆರೋಪಗಳನ್ನು ನಿರಾಕರಿಸಿ ಹಳೆಯ ರೀತಿಯಲ್ಲೇ ವಿವಾದಕ್ಕೆ ಅಂತ್ಯ ಹಾಡಿದೆ. ಹಾಲಿ ಸನ್ನಿವೇಶದಲ್ಲಿ ಶಿಕ್ಷಣದಲ್ಲಿನ ಭಾಷಾ ಸಂಬಂಧಿ ವಿಷಯಗಳ ಕುರಿತಾದ ಅಧಿಕೃತ ಹೇಳಿಕೆಗಳು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಬೇಕೆಂಬ ಬಹುಜನರ ಒತ್ತಾಯಗಳ ಬಗೆಗಿನ ಟೀಕೆ-ಟಿಪ್ಪಣಿಗಳ ಸುತ್ತಲೇ ಕೇಂದ್ರೀಕೃತವಾಗಿವೆ.

ಹಾಲಿ ಶಿಕ್ಷಣ ನೀತಿಯ ಕರಡೂ ಸಹ ಪ್ರಾಥಮಿಕ ಹಂತದಲ್ಲಿ ಸಾಧ್ಯವಾದಲ್ಲೆಲ್ಲಾ ಮಾತೃಭಾಷೆ ಅಥವಾ ಮನೆಯ ಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂದು ಪ್ರಸ್ತಾಪಿಸುತ್ತದೆ. ಇದು ಆಳವಾಗಿ ಬೇರುಬಿಟ್ಟಿರುವ ಆದರೆ ಅತ್ಯಂತ ಸಮಸ್ಯಾತ್ಮಕವಾದ ಶಿಕ್ಷಣದ ಸಾಂಸ್ಥಿಕ ಪರಿಸ್ಥಿತಿಯ ಬಗ್ಗೆ ಬಹಿರಂಗವಾಗಿ ಘೋಷಿಸಲಾಗದ ಆದರೆ ಅದಕ್ಕಿಂತ ಆಳದಲ್ಲಿರುವ ಸಮ್ಮತಿರೂಪದ ಗ್ರಹಿಕೆಯ ಸಂಕೇತವಾಗಿದೆ. ಶಿಕ್ಷಣ ನೀತಿಗಳ ಬಗೆಗಿನ ಚರ್ಚೆಗಳು ಹೆಚ್ಚೆಂದರೆ ಹಳೆಯ ಮತ್ತು ಹೊಸ ಆಳುವ ವರ್ಗಗಳ ಬೂಟಾಟಿಕೆಯಿಂದ ಕೂಡಿದ ನಿಲುವುಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಷ್ಟೇ ಆಗಿಬಿಟ್ಟಿದೆ. ಸಮಕಾಲೀನ ಸನ್ನಿವೇಶದಲ್ಲಿ ಹಿಂದಿಗಿಂತ ಇನ್ನಿತರ ಸಂಗತಿಗಳು ರಾಷ್ಟ್ರೀಯ ಭಾವೈಕ್ಯತೆಯ ಸಾಧನಗಳಾಗಿ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದರಿಂದ ಹಿಂದೊಮ್ಮೆ ರಾಷ್ಟ್ರೀಯ ಮನೋಭಾವದ ಸಂಕೇತವಾಗಿದ್ದ ಹಿಂದಿಯ ಮೆರುಗು ಆ ವಿಷಯದಲ್ಲಿ ಕುಂದುತ್ತಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News