ಬಾಂಗ್ಲಾಕ್ಕೆ ಆಸ್ಟ್ರೇಲಿಯ ಸವಾಲು

Update: 2019-06-19 18:30 GMT

ಬರ್ಮಿಂಗ್‌ಹ್ಯಾಮ್, ಜೂ.19: ಸೆಮಿಫೈನಲ್‌ಗೇರುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡ ಗುರುವಾರ ನಡೆಯಲಿರುವ ವಿಶ್ವಕಪ್‌ನ 26ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

ಆ್ಯರೊನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆತಿಥೇಯ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದೆ. ವೆಸ್ಟ್‌ಇಂಡೀಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ಬಾಂಗ್ಲಾದೇಶ ಅದೇ ಫಾರ್ಮ್‌ನ್ನು ಮುಂದುವರಿಸುವ ಯೋಜನೆಯಲ್ಲಿದೆ.

 ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಔಟಾಗದೆ 126 ರನ್ ದಾಖಲಿಸಿ ವಿಂಡೀಸ್ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಕಿಬ್ ಸತತ ಶತಕಗಳನ್ನು ದಾಖಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯದ ವಿರುದ್ಧ ಬಾಂಗ್ಲಾ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಆಸ್ಟ್ರೇಲಿಯಕ್ಕೆ ಈ ಆಘಾತದ ನೆನಪು ಇದೆ. ಆದರೆ ಅದು ಶಾಕಿಬ್‌ನ್ನು ಕಟ್ಟಿ ಹಾಕಲು ಪ್ರಯತ್ನ ನಡೆಸಲಿದೆ ಎಂದು ಕೋಚ್ ಜಸ್ಟಿನ್ ಲಾಂಗರ್ ತಿಳಿಸಿದ್ದಾರೆ. ಶಾಕಿಬ್ ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಮತ್ತು ಎಡಗೈ ಸ್ಪಿನ್ನರ್ ಎಂದು ಲಾಂಗರ್ ಅಭಿಪ್ರಾಯಪಟ್ಟಿದ್ದಾರೆ.

ಶಾಕಿಬ್ ಆಸ್ಟ್ರೇಲಿಯದ ವೇಗದ ಅಸ್ತ್ರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸದಲ್ಲಿದ್ದಾರೆ.

 ಆಸ್ಟ್ರೇಲಿಯ ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಗಾಯದಿಂದ ಎರಡು ಪಂದ್ಯಗಳಿಂದ ದೂರ ಉಳಿದಿದ್ದರು. ಅವರು ಇದೀಗ ಫಿಟ್ನೆಸ್ ಸಮಸ್ಯೆಯಿಂದ ಹೊರಬಂದಿದ್ದಾರೆ. ಇದು ಆಸ್ಟ್ರೇಲಿಯದ ಪಾಲಿಗೆ ಶುಭ ಸುದ್ದಿ. ಅವರು ಆಸ್ಟ್ರೇಲಿಯದ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯ ಮೊದಲ ಮೂರು ಪಂದ್ಯಗಳಲ್ಲಿ ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪರನ್ನು ಕಣಕ್ಕಿಳಿಸಿತ್ತು. ಈ ಪೈಕಿ ಎರಡರಲ್ಲಿ ಜಯ ಗಳಿಸಿತ್ತು. ಕಳೆದ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿಲ್ಲ. ಪಾರ್ಟ್‌ಟೈಮ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಪ್ರಮುಖ ಸ್ಪಿನ್ನರ್ ಆಗಿ ಆಸ್ಟ್ರೇಲಿಯ ಕಳೆದು ಎರಡು ಪಂದ್ಯಗಳಲ್ಲಿ ಬಳಿಸಿಕೊಂಡಿತ್ತು. ಆಫ್ ಸ್ಪಿನ್ನರ್ ನಥಾನ್ ಲಿಯೊನ್ ಈ ವರೆಗೂ ಆಡಿಲ್ಲ. ಆರಂಭದಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಆಘಾತ ನೀಡಿದ್ದ ಬಾಂಗ್ಲಾದೇಶ ತಂಡ ಚೊಚ್ಚಲ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ಜಯ ದಾಖಲಿಸಿ ಇದೀಗ ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಸೆಮಿಫೈನಲ್‌ಗೇರುವ ಕನಸು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News