ವಿ.ಕೆ.ಉಬೇದುಲ್ಲಾ ಶಾಲೆ ವಕ್ಫ್ ಬೋರ್ಡ್ ಅಧೀನಕ್ಕೆ ಪಡೆಯಲು ಕ್ರಮ: ಝಮೀರ್ ಅಹ್ಮದ್

Update: 2019-06-20 13:22 GMT

ಬೆಂಗಳೂರು, ಜೂ.20: ಬಹುಕೋಟಿ ವಂಚನೆ ಪ್ರಕರಣದ ಆರೋಪ ಹೊತ್ತಿರುವ ಐಎಂಎ ಸಂಸ್ಥೆ ದತ್ತು ಪಡೆದು ನಡೆಸುತ್ತಿದ್ದ ಶಿವಾಜಿನಗರದ ವಿ.ಕೆ.ಒಬೇದುಲ್ಲಾ ಸರಕಾರಿ ಶಾಲೆಯನ್ನು ರಾಜ್ಯ ವಕ್ಫ್ ಬೋರ್ಡ್ ಅಧೀನಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಗುರುವಾರ ವಿ.ಕೆ.ಒಬೇದುಲ್ಲಾ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ರಿಝ್ವನ್ ಅರ್ಶದ್, ಶಾಲೆಯ ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಐಎಂಎ ಸಂಸ್ಥೆಯವರು 2021ರವರೆಗೆ ಈ ಶಾಲೆಯನ್ನು ದತ್ತು ತೆಗೆದುಕೊಂಡು ನಿರ್ವಹಣೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈಗ ಸಾವಿರಾರು ಜನರನ್ನು ವಂಚಿಸಿ ಅದರ ಮುಖ್ಯಸ್ಥರು ತಲೆ ಮರೆಸಿಕೊಂಡಿದ್ದಾರೆ. ಇದರಿಂದಾಗಿ, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 1800 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು ಎಂದು ಅವರು ಹೇಳಿದರು.

ಈ ಶಾಲೆ ಮತ್ತೆ ಸರಕಾರದ ವಶಕ್ಕೆ ಹೋದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂಬ ಆತಂಕ ಪೋಷಕರಲ್ಲಿತ್ತು. ಇದರಿಂದಾಗಿ, ಕಳೆದ 8-10 ದಿನಗಳಿಂದ ಅವರು ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಸಂಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮೊದಲು ಈ ಶಾಲೆಯನ್ನು ವಕ್ಫ್ ಬೊರ್ಡ್ ಅಧೀನಕ್ಕೆ ತೆಗೆದುಕೊಂಡು, ನಮ್ಮ ಯಾವುದಾದರೂ ಲಾಭದಾಯಕವಾದ ಸಂಸ್ಥೆ ಅಥವಾ ಇತರ ಯಾವುದಾದರೂ ಸಂಘ ಸಂಸ್ಥೆಗೆ ಈ ಶಾಲೆಯ ನಿರ್ವಹಣೆಯ ಜವಾಬ್ದಾರಿ ವಹಿಸಬೇಕೆ ಎಂಬುದುರ ಕುರಿತು ನಂತರ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಈ ಶಾಲೆಯಲ್ಲಿ 30 ಸರಕಾರಿ ಹಾಗೂ 40 ಖಾಸಗಿ ಶಿಕ್ಷಕರಿದ್ದಾರೆ. ಮೊದಲು ಕೇವಲ 13 ಸರಕಾರಿ ಶಿಕ್ಷಕರಿದ್ದರೂ ಈಗ ಹೆಚ್ಚುವರಿಯಾಗಿ 17 ಶಿಕ್ಷಕರನ್ನು ಸರಕಾರ ನೀಡಿದೆ. ಖಾಸಗಿ ಶಿಕ್ಷಕರು ತಮ್ಮ ಮೂಲ ದಾಖಲಾತಿಗಳನ್ನು ನೇಮಕಾತಿ ವೇಳೆ ಐಎಂಎ ಸಂಸ್ಥೆಗೆ ನೀಡಿರುವುದಾಗಿ ತಿಳಿಸಿದ್ದಾರೆ. ದಾಖಲೆಗಳ ನಕಲು ಪ್ರತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅರ್ಹತೆ ಹೊಂದಿರುವ ಖಾಸಗಿ ಶಿಕ್ಷಕರನ್ನು ಮುಂದುವರೆಸಲಾಗುವುದು. ಅವರು ಆತಂಕ ಪಡುವ ಅಗತ್ಯವಿಲ್ಲ. ಅರ್ಹತೆ ಇಲ್ಲದೇ ಇರುವವರನ್ನು ಸರಕಾರದ ನೀತಿಯಂತೆ ಮುಂದುವರೆಸಲು ಸಾಧ್ಯವಿಲ್ಲ. ಸೋಮವಾರ ಶಿಕ್ಷಕರ ಸಭೆಯನ್ನು ಕರೆಯಲಾಗಿದೆ. ಆ ವೇಳೆಗಾಗಲೇ ದಾಖಲಾತಿಗಳ ಪರಿಶೀಲನೆ ಕಾರ್ಯವು ಪೂರ್ಣಗೊಂಡಿರುತ್ತದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

30 ಮಂದಿ ಸರಕಾರಿ ಶಿಕ್ಷಕರು ಈಗ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಆದುದರಿಂದ, ವಿದ್ಯಾರ್ಥಿಗಳಾಗಲಿ ಅವರ ಪೋಷಕರಾಗಲಿ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರಕಾರವು ಬಡವರ ಪರವಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಒಬೇದುಲ್ಲಾ ಶರೀಫ್, ಸಯ್ಯದ್ ಶುಜಾವುದ್ದೀನ್, ಇಶ್ತಿಯಾಕ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News