ಮೈತ್ರಿ ಸರಕಾರ ಬೀಳಿಸಲು ಸಾಧ್ಯವಿಲ್ಲ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-06-20 14:25 GMT

ಬೆಂಗಳೂರು, ಜೂ. 20: ‘ಮೈತ್ರಿ ಸರಕಾರ ರಚನೆಯಾದ ದಿನದಿಂದಲೂ ಸರಕಾರ ಬೀಳಿಸಲು ವಿಪಕ್ಷ ಬಿಜೆಪಿ ಪ್ರಯತ್ನ ನಡೆಸಿದೆ. ಆದರೆ, ಈವರೆಗೂ ಅದು ಸಾಧ್ಯವಾಗಿಲ್ಲ, ಮುಂದೆಯೂ ಸಾಧ್ಯವಾಗುವುದಿಲ್ಲ ಎಂಬುದನ್ನು ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತರ ನೀಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೈತ್ರಿ ಸರಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ‘ಮೈತ್ರಿ ಪರ್ವ’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿ ಒಂದು ವರ್ಷ ಜನಪರ ಆಡಳಿತ ನೀಡಿದೆ. ಆದರೆ, ‘ಆಡಳಿತ ಚುರುಕಾಗಿ ನಡೆಯುತ್ತಿಲ್ಲ’ ಎಂದು ವಿಪಕ್ಷ ಬಿಜೆಪಿ ಟೀಕೆ ಮಾಡುತ್ತಿದೆ. ಇದಕ್ಕೆ ಉತ್ತರವಾಗಿ, ಸಿಎಂ ಕುಮಾರಸ್ವಾಮಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓಗಳ ಸಭೆ ನಡೆಸಿ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮಾರ್ಗದರ್ಶನ ಮಾಡಿದ್ದಾರೆಂದು ಹೇಳಿದರು.

ಒಂದು ವರ್ಷದ ಆಡಳಿತದ ಅವಧಿಯಲ್ಲಿ ಮೈತ್ರಿ ಸರಕಾರ ಅನೇಕ ಏಳು-ಬೀಳು ಕಂಡಿದೆ. ವಿಪಕ್ಷದ ಅಸಹಕಾರದ ಮಧ್ಯೆಯೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಉತ್ತಮ ಆಡಳಿತ ಕೊಟ್ಟಿದೆ ಎಂದ ಪರಮೇಶ್ವರ್, ಜನರ ಆಶೋತ್ತರಗಳಿಗೆ ಸ್ಪಂದಿಸಿ ಮುಂದಿನ ನಾಲ್ಕು ವರ್ಷವೂ ಸ್ಥಿರವಾಗಿ ನಮ್ಮ ಸರಕಾರ ಇರಲಿದೆ ಎಂದು ಹೇಳಿದರು.

ಶಿಕ್ಷಣ, ಕೃಷಿ, ಆರೋಗ್ಯ, ನೀರಾವರಿ, ಸಮಾಜ ಕಲ್ಯಾಣ, ಕೈಗಾರಿಕಾ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೈತ್ರಿ ಸರಕಾರ ಆದ್ಯತೆ ನೀಡಿದೆ. ಅಲ್ಲದೆ, ದೇಶದಲ್ಲೆ ಮಾದರಿ ಎನ್ನಬಹುದಾದ ರೈತರ 46 ಸಾವಿರ ಕೋಟಿ ರೂ.ಕೃಷಿ ಸಾಲಮನ್ನಾ ಮಾಡಿದೆ. ಅಲ್ಲದೆ, 11.5 ಲಕ್ಷ ರೈತರಿಗೆ ‘ಋಣಮುಕ್ತ ಪತ್ರ’ ನೀಡಿದ್ದೇವೆಂದು ಪರಮೇಶ್ವರ್ ವಿವರಿಸಿದರು.

ರೈತರ ಮನೆ ಬಾಗಿಲಿಗೆ ಆಡಳಿತ: ಸರಕಾರದ ಆಡಳಿತವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಅಧಿಕಾರಿಗಳು ಋಣಮುಕ್ತ ಪತ್ರವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆದಿದ್ದು ದೊಡ್ಡ ನಿರ್ಧಾರ. ಸಾಮಾಜಿಕ ನ್ಯಾಯಕ್ಕಾಗಿ ಬಡತನ ರೇಖೆಗಿಂತ ಒಳಗಿರುವವರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ಸಾವಿರ ಕೋಟಿ ರೂ.ಮೀಸಲಿಟ್ಟಿದೆ. ಬೀದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗೆ ‘ಬಡವರ ಬಂಧು ಯೋಜನೆ’ಯಡಿ 4.5ಲಕ್ಷ ಜನರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ನೀರಾವರಿಗೆ 17,500 ಕೋಟಿ ರೂ., ಸಣ್ಣ ನೀರಾವರಿಗೆ 2,500 ಕೋಟಿ ರೂ., ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂ.ಒದಗಿಸಲಾಗಿದೆ. ನವ ಬೆಂಗಳೂರು ಯೋಜನೆಗೆ 9 ಸಾವಿರ ಕೋಟಿ ರೂ., ಕಾವೇರಿ 5ನೆ ಹಂತದ ಯೋಜನೆಗೂ ಹಣ ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News