ಒಂದೆರಡು ಕತೆ-ಕವಿತೆ ಓದಿ ಅಭಿಪ್ರಾಯಿಸುವುದು ಅಕ್ಷಮ್ಯ ಅಪರಾಧ: ಡಾ.ಎಚ್.ಎಸ್.ವೆಂಕಟೇಶಮೂರ್ತಿ

Update: 2019-06-20 13:19 GMT

ಬೆಂಗಳೂರು, ಜೂ.20: ಓದುಗರು ಯಾವುದೆ ಲೇಖಕನ ಕುರಿತು ಆತನ ಒಂದೆರಡು ಕತೆ, ಕಾವ್ಯಗಳನ್ನು ಓದಿ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸುವುದು ಅಕ್ಷಮ್ಯ ಅಪರಾಧವೆಂದು ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಿಸಿದ್ದಾರೆ.

ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೀ.ನಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ, ಡಾ.ಸಿದ್ದಲಿಂಗಯ್ಯ ಸೇರದಂತೆ ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ಸಾಹಿತ್ಯ ವಾಚಿಕೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕತೆಗಾರ, ಕಾದಂಬರಿಕಾರ, ಕವಿ, ಪ್ರಬಂಧಕಾರ ಹೀಗೆ ಯಾವುದೆ ಪ್ರಕಾರದ ಲೇಖಕನನ್ನು ಒಂದು ಅಥವಾ ಎರಡು ಕತೆ, ಕವಿತೆಗಳಿಂದ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಮಗ್ರ ಸಾಹಿತ್ಯವನ್ನು ಓದುವ ಮೂಲಕ ಸಾಹಿತಿಯೊಬ್ಬನ ಚಿಂತನೆ, ಸೃಜನಶೀಲತೆಯ ಮಟ್ಟವನ್ನು ತಿಳಿಯಲು ಸಾಧ್ಯ. ಹೀಗಾಗಿ ಓದುಗರು ಸಾಹಿತಿಗಳ ಸಮಗ್ರ ಸಾಹಿತ್ಯವನ್ನು ಓದುವಂತಾಗಬೇಕು. ಅದರಲ್ಲೂ ಸಂಶೋಧಕರು ಹಾಗೂ ವಿಮರ್ಶಕರು ಸಾಹಿತಿ ಕೃತಿಗಳ ಸಮಗ್ರ ಓದು ಅಗತ್ಯವಿದೆ ಎಂದು ಅವರು ಹೇಳಿದರು.

ಒಂದೆರಡು ವಚನ, ದಾಸರ ಪದಗಳ ಓದಿನಿಂದ ವಚನಕಾರರ ಹಾಗೂ ದಾಸರ ಮೂಲ ಆಶಯಗಳನ್ನು ತಿಳಿಯಲು ಸಾಧ್ಯವಿಲ್ಲ. ಹಾಗೆಯೆ ಪಂಪ, ರನ್ನ, ಕುಮಾರವ್ಯಾಸನ ಕಾವ್ಯಗಳನ್ನು ಸೀಮಿತ ಓದಿನಿಂದ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಇಚ್ಛಿಸುವವರು ಸಾಹಿತಿಗಳ ಸಮಗ್ರ ಸಾಹಿತ್ಯವನ್ನು ಓದುವಂತಹ ಬದ್ಧತೆಯನ್ನು ತೋರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಇವತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪುರವರ ಗುರುಗಳಾದ ಟಿ.ಎಸ್.ವೆಂಕಣ್ಣಯ್ಯರವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸುತ್ತಿರುವುದು ಒಳ್ಳೆಯ ವಿಚಾರವಾಗಿದೆ. ಹಾಗೆಯೆ ತೀ.ನಂ.ಶ್ರೀಕಂಠಯ್ಯ, ಎಂ.ಕೆ.ಇಂದಿರಾ, ಸಿದ್ಧಲಿಂಗಯ್ಯ, ಲಲಿತಾ ನಾಯಕ್, ಎಲ್.ಹನುಮಂತಯ್ಯ ಸೇರಿದಂತೆ ಹಲವು ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಓದುಗರ ಕೈ ಸೇರುತ್ತಿದೆ. ಇವೆಲ್ಲ ಸಾಹಿತ್ಯವನ್ನು ಓದುಗರು ಓದುವಂತಾಗಲಿ ಎಂದು ಅವರು ಆಶಿಸಿದರು.

ಪುಸ್ತಕ ಪ್ರಕಟನೆ ಎನ್ನುವುದು ಉದ್ಯಮವಾಗದೆ, ಸಂಸ್ಕೃತಿಯಾದಾಗ ಮಾತ್ರ ಎಲ್ಲ ಪ್ರಕಾರದ ಸಾಹಿತ್ಯಕ್ಕೂ ಮನ್ನಣೆ ಸಿಗುತ್ತದೆ. ಇತ್ತೀಚಿಗೆ ಕವಿತಾ ಸಂಕಲನಗಳನ್ನು ಪ್ರಕಟಿಸಲು ಯಾವ ಪ್ರಕಾಶಕರು ಮುಂದೆ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯವೆಂದು ಅವರು ಹೇಳಿದರು.

ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಪುಸ್ತಕ ಪ್ರಾಧಿಕಾರ ಸಾಹಿತಿಗಳು, ಓದುಗರು ಹಾಗೂ ಪ್ರಕಾಶಕರ ನಡುವಿನ ಸಂಪರ್ಕ ಸೇತುವೆಯಾಗಿದೆ. ಆ ಪ್ರಕಾರವಾಗಿ ಓದುಗರಿಗೆ ಅಗತ್ಯವಾದ ಪುಸ್ತಕ ಪ್ರಕಟಿಸುವಂತೆ ಪ್ರೋತ್ಸಾಹಿಸಲು ಪ್ರಕಾಶಕರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದಲೂ ಎಲ್ಲ ಪ್ರಕಾರದ ಕೃತಿಗಳನ್ನು ಪ್ರಕಟಿಸುತ್ತಾ ಬರಲಾಗುತ್ತಿದೆ. ಈಗ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಆನ್‌ಲೈನ್‌ನಲ್ಲಿ ದೊರೆಯುವುದರಿಂದ ಹೆಚ್ಚು ಬೇಡಿಕೆ ಇದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ, ಹಿರಿಯ ಸಾಹಿತಿಗಳಾದ ಸಿದ್ಧಲಿಂಗಯ್ಯ, ಲಲಿತಾ ನಾಯಕ್, ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಹಲವರು ಸಾಹಿತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News