ಐಎಂಎ ಜ್ಯುವೆಲ್ಸ್ ಮಳಿಗೆಯಲ್ಲಿ ಎಸ್‌ಐಟಿ ಪರಿಶೀಲನೆ: ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನ, ದಾಖಲೆ ಪತ್ರ ವಶ

Update: 2019-06-20 14:18 GMT

ಬೆಂಗಳೂರು, ಜೂ.20: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಐಎಂಎ ಜ್ಯುವೆಲ್ಸ್ ಮಳಿಗೆಯ ಬೀಗ ತೆಗೆದು ಕೋಟ್ಯಂತರ ರೂ.ಮೌಲ್ಯದ ವಜ್ರ, ಚಿನ್ನ, ಬೆಳ್ಳಿ ಆಭರಣ ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಸುಮಾರು 50 ಮಂದಿಯನ್ನೊಳಗೊಂಡ ವಿಶೇಷ ತನಿಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಗ್ಗೆ 8ಕ್ಕೆ ಐಎನ್‌ಎ ಜ್ಯುವೆಲ್ಸ್ನ ಒಳಗೆ ಪ್ರವೇಶಿಸಿದರು. ಜ್ಯುವೆಲ್ಸ್ನ ಪ್ರತಿಯೊಂದು ಕೋಣೆ, ಲಾಕರ್‌ಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಎಲ್ಲಿಯೂ ನಗದು ಪತ್ತೆಯಾಗಿಲ್ಲ. ಆದರೆ, ಕಬೋರ್ಡ್‌ಗಳಲ್ಲಿದ್ದ ವಜ್ರ, ಚಿನ್ನ, ಚಿನ್ನದ ತಟ್ಟೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾ ತಂಡದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಮಳಿಗೆಯಲ್ಲಿ ವಶಪಡಿಸಿಕೊಂಡಿರುವ ವಜ್ರ, ಚಿನ್ನ, ಬೆಳ್ಳಿಯ ಮೌಲ್ಯಮಾಪನವನ್ನು ಚಿನ್ನ ಪರಿಶೋಧಕರು, ಲೆಕ್ಕ ಪರಿಶೋಧಕರಿಂದ ಮಾಡಿಸಲಾಗುತ್ತಿದೆ. ಅಲ್ಲಿ ದೊರೆತಿರುವ ಕೆಲವೊಂದು ದಾಖಲೆ ಪತ್ರಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತಿದೆ. ಇಂದು ಮಧ್ಯರಾತ್ರಿವರೆಗೆ ಶೋಧಕಾರ್ಯ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಮಳಿಗೆಯಲ್ಲಿ ಅಡವಿಟ್ಟುಕೊಂಡಿರುವ ಚಿನ್ನಾಭರಣಗಳು, ಹಣ ಹೂಡಿಕೆ ಮಾಡಿರುವ ಸಾರ್ವಜನಿಕರಿಗೆ ಸಂಬಂಧಿಸಿದ ಬಾಂಡ್‌ಗಳ ಮಾಹಿತಿಗಳು, ಬಡ್ಡಿ ವ್ಯವಹಾರದ ದಾಖಲೆ ಪತ್ರಗಳು ಲಭ್ಯವಾಗಿವೆ. ಅವುಗಳನ್ನು ಕ್ರಮವಾಗಿ ಜೋಡಿಸಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಜಯನಗರದ ಮಳಿಗೆಯಲ್ಲಿ 33 ಕೋಟಿ ರೂ.ಮೌಲ್ಯದ ವಜ್ರ, ಚಿನ್ನ ದೊರೆತಿದ್ದು, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಮಳಿಗೆಯಲ್ಲಿ ಅದಕ್ಕಿಂತ ಹೆಚ್ಚು ಮೌಲ್ಯದ ಆಭರಣಗಳು ದೊರೆತಿರುವ ಅಂದಾಜು ಇದೆ. ಇವುಗಳ ಒಟ್ಟು ಮೌಲ್ಯಮಾಪನ ನಡೆಯುತ್ತಿದ್ದು, ನಾಳೆ ಬೆಳಗ್ಗೆ ಒಟ್ಟಾರೆ ಮೌಲ್ಯದ ನಿಖರ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News