ರಸ್ತೆ ಅಗಲೀಕರಣದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ: ಎನ್.ಆರ್.ರಮೇಶ್ ಆರೋಪ

Update: 2019-06-20 14:42 GMT

ಬೆಂಗಳೂರು, ಜೂ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಸ್ತೆ ಅಗಲೀಕರಣ ವಿಭಾಗದಿಂದ ಕೈಗೆತ್ತಿಕೊಂಡಿರುವ ಎರಡು ರಸ್ತೆ ಅಗಲೀಕರಣ ಕಾಮಗಾರಿ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬನ್ನೇರುಘಟ್ಟ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣ ಕಾಮಗಾರಿ ಯೋಜನೆಗೆ ಸಂಬಂಧಪಟ್ಟ 1,123 ಪುಟಗಳಷ್ಟು ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬನ್ನೇರುಘಟ್ಟ ರಸ್ತೆಯ 7.4 ಕಿ.ಮೀ ಮತ್ತು ಸರ್ಜಾಪುರ ರಸ್ತೆಯ 4.74 ಕಿ.ಮೀ ಉದ್ದದ ಸರ್ಜಾಪುರ ರಸ್ತೆಯ ಅಗಲೀಕರಣ ಕಾಮಗಾರಿಯಲ್ಲಿ ಅಗಲೀಕರಣ ನಡೆದಿರುವುದು ಕೇವಲ 100 ಅಡಿಗಳಷ್ಟು ಮಾತ್ರ ಎಂದು ದೂರಿದರು.

ಈ ಯೋಜನೆಗಳಲ್ಲಿ 170 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಲಾಗಿದೆ. 7.4 ಕಿ.ಮೀ ಉದ್ದದ ಬನ್ನೇರುಘಟ್ಟ ರಸ್ತೆ ಅಗಲೀಕರಣ ಕಾಮಗಾರಿ 157.44 ಕೋಟಿ ಮೊತ್ತಕ್ಕೆ ಆರ್.ಕೆ.ಇನ್ಫ್ರಾ ಕಾರ್ಪೋರೇಷನ್ ಸಂಸ್ಥೆಗೆ ಮತ್ತು 4.74 ಕಿ.ಮೀ ಉದ್ದದ ಸರ್ಜಾಪುರ ರಸ್ತೆಯ ಅಗಲೀಕರಣ ಕಾಮಗಾರಿಯನ್ನು 100 ಕೋಟಿ ಮೊತ್ತಕ್ಕೆ ಎನ್.ಎಸ್.ನಾಯಕ್ ಅಂಡ್ ಸನ್ಸ್ ಸಂಸ್ಥೆಗೆ ನೀಡಲಾಗಿತ್ತು ಎಂದು ಹೇಳಿದರು.

ಅಲ್ಲದೆ, 2 ರಸ್ತೆಗಳ ಅಗಲೀಕರಣ ಕಾರ್ಯಕ್ಕೆ ಕಾರ್ಯಾದೇಶ ಪತ್ರ ನೀಡಿ ತಿಂಗಳುಗಟ್ಟಲೆ ಕಳೆದಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿಲ್ಲ. 2 ರಸ್ತೆಗಳಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಕಾಮಗಾರಿಯ ಲಕ್ಷಣಗಳಿಲ್ಲ. ಹಳೆಯ ಚರಂಡಿಗಳನ್ನು ದುರಸ್ತಿ ಮಾಡಿ ಬಣ್ಣ ಬಳಿದು ಹೊಸದು ಎಂದು ಬಿಂಬಿಸಲಾಗಿದೆ ಎಂದು ಆಪಾದಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ದೃಢಪಟ್ಟಿರುವ ಹಣವನ್ನು ಇಬ್ಬರು ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಎರಡು ಯೋಜನೆಗಳಿಗೆ ಸಂಬಂಧಪಟ್ಟಂತೆ ಅನುಮೋದನೆ ನೀಡಿರುವ ರಸ್ತೆಗಳ ಅಗಲೀಕರಣ ವಿಭಾಗದ ಪ್ರಭಾವಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಸೇರಿದಂತೆ ಇತರ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆಗೆ ವಹಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು.

ಬನ್ನೇರುಘಟ್ಟ ರಸ್ತೆ ಹಾಗೂ ಸರ್ಜಾಪುರ ರಸ್ತೆಯ ಹಗರಣವನ್ನು ಸಿಬಿಐಗೆ ಒಪ್ಪಿಸಿ, ಆರ್.ಕೆ.ಇನ್ಫ್ರಾ ಕಾರ್ಪೋರೇಷನ್ ಸಂಸ್ಥೆ ಹಾಗೂ ಎನ್.ಎಸ್.ನಾಯಕ್ ಅಂಡ್ ಸನ್ಸ್ ಗುತ್ತಿಗೆ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.

-ಎನ್.ಆರ್.ರಮೇಶ್, ಬಿಜೆಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News