ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಡೆಂಗ್ ಪ್ರಕರಣಗಳು: ಎಚ್ಚರಿಕೆ ವಹಿಸಲು ಸೂಚನೆ

Update: 2019-06-20 14:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.20: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಡೆಂಗ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕಳೆದ ಜನವರಿಯಿಂದ ಇದುವರೆಗೂ ಅಂದಾಜು 760 ಪ್ರಕರಣಗಳು ವರದಿಯಾಗಿವೆ.

ಮಳೆಗಾಲ ಆರಂಭವಾಗಿದ್ದು, ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ಸಾಕಷ್ಟು ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಇಲ್ಲದಿದ್ದರೆ ಮಳೆಗಾಲ ಮುಗಿಯುವದರೊಳಗೆ ಡೆಂಗ್ ರೋಗ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಮೆ ತಿಂಗಳಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 349 ಜನರಲ್ಲಿ ಡೆಂಗ್ ಕಾಣಿಸಿಕೊಂಡಿದೆ. ರೋಗ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ವಾರ್ಡ್‌ವಾರು 3 ಜನರ ತಂಡಗಳನ್ನು ರಚಿಸಲಾಗಿದೆ. ಡೆಂಗ್ ಪ್ರಕರಣ ಪತ್ತೆಯಾದ ಮನೆಗಳಿಗೆ ತೆರಳಿ ಅಲ್ಲಿ ಸುತ್ತಮುತ್ತಲೂ ರೋಗ ಉತ್ಪತ್ತಿಗೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಿ ನಾಶ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಹೇಳಿದ್ದಾರೆ. 

ಡೆಂಗ್ ನಿಯಂತ್ರಿಸಲು ಸೊಳ್ಳೆ ಕಚ್ಚದಂತೆ ನಿಗಾ ವಹಿಸಬೇಕು, ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಸೇವಿಸಬೇಕು, ನೀರು ಶೇಖರಣಾ ತೊಟ್ಟಿ ಮತ್ತು ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು, ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ. 

ಎಲ್ಲಿ, ಎಷ್ಟು ಪ್ರಕರಣಗಳು?

ಪೂರ್ವ ವಲಯದಲ್ಲಿ 239, ದಕ್ಷಿಣ ವಲಯದಲ್ಲಿ 120, ಪಶ್ಚಿಮ ವಲಯದಲ್ಲಿ 37, ಬೊಮ್ಮನಹಳ್ಳಿ ವಲಯದಲ್ಲಿ 75, ದಾಸರಹಳ್ಳಿ ವಲಯದಲ್ಲಿ 21, ಮಹದೇವಪುರ ವಲಯದಲ್ಲಿ 113, ರಾಜರಾಜೇಶ್ವರಿ ನಗರ ವಲಯದಲ್ಲಿ 22, ಯಲಹಂಕ ವಲಯದಲ್ಲಿ 88 ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ನಗರದಲ್ಲಿ 28 ಚಿಕುನ್ ಗುನ್ಯಾ, 138 ಮಲೇರಿಯಾ, 127 ವಿಷಮಶೀತ ಜ್ವರ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News