‘ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಮುಖ್ಯಮಂತ್ರಿಗೆ ಮನವಿ

Update: 2019-06-20 15:56 GMT

ಬೆಂಗಳೂರು, ಜೂ. 20: ಲಿಂಗಾಯತ-ವೀರಶೈವ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ(ಓಬಿಸಿ) ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಹಾಗೂ ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಕೋರಿ ಲಿಂಗಾಯತ ಸಮುದಾಯದ ಮುಖಂಡರು ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಖುದ್ದು ಭೇಟಿ ಮಾಡಿದ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಲಿಂಗಾಯತ-ವೀರಶೈವ ಸಮುದಾಯ ರಾಜ್ಯದಲ್ಲಿ ಹಿಂದುಳಿದ ವರ್ಗ ಎಂದು ಪರಿಗಣಿಸಿದ್ದರೂ, ಕೇಂದ್ರ ಪಟ್ಟಿಯಲ್ಲಿ ರಾಜ್ಯದ ಈ ಸಮುದಾಯವನ್ನು ಕೈಬಿಡಲಾಗಿದೆ. ಹೀಗಾಗಿ ಈ ಸಮುದಾಯಕ್ಕೆ ಕೇಂದ್ರ ಸ್ವಾಮ್ಯದ ಬ್ಯಾಂಕ್, ರೈಲ್ವೆ, ಯುಪಿಎಸ್ಸಿ ನೇಮಕ ಹಾಗೂ ಐಐಟಿ, ಐಐಎಂ, ನೀಟ್ ಪ್ರವೇಶ ಸೇರಿ ಇನ್ನಿತರ ರಂಗಗಳಲ್ಲಿ ಸೌಲಭ್ಯದಿಂದ ವಂಚಿತವಾಗಿದೆ.

ಆದುದರಿಂದ ಲಿಂಗಾಯತ ವೀರಶೈವ ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಅಲ್ಲದೆ, ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ಸರಕಾರ ಸೌಲಭ್ಯ ಕಲ್ಪಿಸಲು ಸಹಕರಿಸಬೇಕೆಂದು ಮುಖಂಡರು ಕೋರಿದ್ದಾರೆ.

ಸಚಿವ ಸಂಪುಟ ಸಹೋದ್ಯೊಗಿ ಮಿತ್ರರು ಶೀಘ್ರದಲ್ಲೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಶಾಸಕರೆಲ್ಲರೂ ತಿಂಗಳಲ್ಲಿ ಒಂದು ದಿನ ಗ್ರಾಮ ವಾಸ್ತವ್ಯ ಮಾಡುವಂತೆ ಈಗಾಗಲೇ ನಾನು ಮನವಿ ಮಾಡಿದ್ದು, ಇದರಿಂದ ಗ್ರಾಮಗಳು ಅಭಿವೃದ್ಧಿಗೆ ಅನುಕೂಲವಾಗಲಿದೆ

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News