ಬೆಂಗಳೂರು ನಗರ ವ್ಯಾಪ್ತಿಯ ಗ್ರಂಥಾಲಯಗಳು ಪಾಲಿಕೆ ಸುಪರ್ದಿಗೆ ನೀಡಲು ಕೋರಿಕೆ

Update: 2019-06-20 16:13 GMT

ಬೆಂಗಳೂರು, ಜೂ.20 : ಗ್ರಂಥಾಲಯಗಳಿಗೆ ಸೆಸ್ ನೀಡುವ ಸಂಬಂಧದ ಗೊಂದಲಗಳ ನಿವಾರಣೆಯ ಸಲುವಾಗಿ ನಗರದಲ್ಲಿನ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಪಾಲಿಕೆ ಸುಪರ್ದಿಗೆ ನೀಡುವಂತೆ ಬಿಬಿಎಂಪಿ ಕೋರಿಕೆ ಸಲ್ಲಿಸಲು ಮುಂದಾಗಿದೆ.

ಗ್ರಂಥಾಲಯ ಸೆಸ್ ಪಾವತಿ ವಿಚಾರ ಕಳೆದ ಮೂರು-ನಾಲ್ಕು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಹಾಗೂ ಬಿಬಿಎಂಪಿ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ಗ್ರಂಥಾಲಯಗಳನ್ನು ಪಾಲಿಕೆಯಿಂದಲೇ ನಿರ್ವಹಣೆ ಮಾಡಲು ಸಿದ್ಧವಿದ್ದು, ತಮ್ಮ ವ್ಯಾಪ್ತಿಗೆ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 250ಕ್ಕೂ ಅಧಿಕ ಸಾರ್ವಜನಿಕ ಗ್ರಂಥಾಲಯಗಳಿದ್ದು, ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಗ್ರಂಥಾಲಯಗಳ ಅಭಿವೃದ್ಧಿಗೆ ಮುಂದಾಗದ ಇಲಾಖೆ ವಿರುದ್ಧ ಸಾರ್ವಜನಿಕರು ಹಾಗೂ ಓದುಗರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪಾಲಿಕೆ ಹಾಗೂ ಸರಕಾರದಿಂದ ಅಗತ್ಯ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಗಳು ದೂರುತ್ತಾರೆ. ಬಿಬಿಎಂಪಿ ಕಳೆದ ಐದು ವರ್ಷಗಳಿಂದ 300 ಕೋಟಿಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿರುವುದರಿಂದ ನಗರದಲ್ಲಿರುವ ಗ್ರಂಥಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಇತ್ತೀಚೆಗೆ ಗ್ರಂಥಾಲಯ ಸೆಸ್ ಕುರಿತಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಬಿಬಿಎಂಪಿ, ವಿವಿಧ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕೂಡಲೇ ಬಾಕಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತರು, ಗ್ರಂಥಾಲಯಗಳ ನಿರ್ವಹಣೆ ಹೊಣೆಯನ್ನು ಪಾಲಿಕೆಗೆ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.

ಸರಕಾರಕ್ಕೆ ಪ್ರಸ್ತಾವನೆ: ನಗರದಲ್ಲಿ ಶಾಖಾ, ಸಮುದಾಯ ಮಕ್ಕಳ ಗ್ರಂಥಾಲಯ, ವಾಚನಾಲಯ, ಸಂಚಾರಿ ಗ್ರಂಥಾಲಯ, ಅಲೆಮಾರಿ ಗ್ರಂಥಾಲಯ, ಕೊಳೆಗೇರಿ, ಶಾಲಾ ಕಾಲೇಜುಗಳಲ್ಲಿ ಸೇರಿ ಒಟ್ಟು 250 ಗ್ರಂಥಾಲಯಗಳಿವೆ. ಆ ಪೈಕಿ ಪ್ರತಿ ವಾರ್ಡ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಪಾಲಿಕೆಗೆ ನೀಡುವಂತೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು. ಜತೆಗೆ ಗ್ರಂಥಾಲಯ ಸಂಪೂರ್ಣ ನಿರ್ವಹಣೆಯನ್ನು ಪಾಲಿಕೆಯಿಂದ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News