ಜೂ.23 ರಂದು ರಾಜ್ಯಕ್ಕೆ ಹಣಕಾಸು ಆಯೋಗದ ಭೇಟಿ

Update: 2019-06-20 16:49 GMT

ಬೆಂಗಳೂರು, ಜೂ.20: ಎನ್.ಕೆ.ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ಜೂ.23 ರಿಂದ 26ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ. ಆಯೋಗವು ಭೇಟಿ ನೀಡುತ್ತಿರುವ ಭಾರತದ 22ನೇ ರಾಜ್ಯ ಕರ್ನಾಟಕವಾಗಿದೆ.

ಆಯೋಗವು ತನ್ನ ಭೇಟಿಯ ಅಂಗವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಸಂಪುಟದ ಇತರ ಸಹೋದ್ಯೋಗಿಗಳು ಮತ್ತು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳ ಜೊತೆ ಸಂವಾದ ನಡೆಸಲಿದೆ. ಅಲ್ಲದೇ, ಆಯೋಗವು ರಾಜ್ಯದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಯೂ ಸಭೆ ನಡೆಸಲಿದೆ.

ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಪ್ರತ್ಯೇಕ ಸಭೆಗಳನ್ನು ಆಯೋಗ ನಡೆಸಲಿದೆ. ಹಿರಿಯ ಅರ್ಥಶಾಸ್ತ್ರಜ್ಞರ ಜೊತೆಯೂ ಸಂವಾದ ನಡೆಸಲಿದೆ ಮತ್ತು ನಂದನ್ ನೀಲೇಕಣಿ ಸಹಿತ ಇತರ ಮಾಹಿತಿ ತಂತ್ರಜ್ಞಾನ ತಜ್ಞರ ಜೊತೆಗೂ ಅದು ಪ್ರತ್ಯೇಕ ಸಂವಾದ ಕಾರ್ಯಕ್ರಮ ನಡೆಸಲಿದೆ.

ಡಿ.ಬಿ.ಟಿ., ಪಿ.ಎಫ್.ಎಂ.ಎಸ್ ಮತ್ತು ಡಿಜಿಟಲ್ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ಸಾಧನೆ ಆಧಾರಿತ, ಪ್ರೋತ್ಸಾಹ ಧನದ ಸಾಧ್ಯತೆಯ ನಿಟ್ಟಿನಲ್ಲಿ ಈ ಸಂವಾದ ಆಯೋಜನೆಯಾಗಿದೆ. ಆಯೋಗವು ರಾಜ್ಯದ ಕೈಗಾರಿಕೋದ್ಯಮದ ಪ್ರತಿನಿಧಿಗಳ ಜೊತೆಗೂ ಸಭೆ ನಡೆಸಲಿದೆ.

ಆಯೋಗವು ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ(ಕೆ.ಎಸ್.ಎನ್.ಡಿ.ಎಂ.ಸಿ.)ಕ್ಕೆ ಭೇಟಿ ನೀಡಲಿದೆ. ಕೆಎಸ್‌ಎನ್‌ಡಿಎಂಸಿಯು ವಿಪತ್ತು ಪ್ರತಿಕ್ರಿಯಾ ನಿಗಾ ಮತ್ತು ನಿರ್ವಹಣೆಗಾಗಿರುವ ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಈ ರೀತಿಯ ವ್ಯವಸ್ಥೆ ಇರುವ ದೇಶದ ಮೊದಲ ಕೇಂದ್ರವಾಗಿದೆ.

ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು, ಅದರ ಸಂಚಾರ ನಿರ್ವಹಣೆ. ಈ ಸಮಸ್ಯೆಯನ್ನು ಅರಿತುಕೊಳ್ಳಲು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಬೆಂಗಳೂರು ನಗರ ಸಾರಿಗೆ ನಿರ್ವಹಣಾ ಕೇಂದ್ರಕ್ಕೆ ಭೇಟಿಯನ್ನೂ ಯೋಜಿಸಲಾಗಿದೆ.

ಹಣಕಾಸು ಆಯೋಗವು ಬೋಷ್ ಎಕ್ಸ್‌ಪಿರಿಯನ್ಸ್ ಕೇಂದ್ರಕ್ಕೂ ಭೇಟಿ ನೀಡಲಿದೆ. ಬೋಷ್ ಸಂಸ್ಥೆ ಬೆಂಗಳೂರಿನ ಅತ್ಯಂತ ಹಳೆಯ ಕಂಪೆನಿಗಳಲ್ಲಿ ಒಂದಾಗಿದೆ. ಇದು ಇತ್ತೀಚೆಗೆ ಅತ್ಯಾಧುನಿಕ ಎಕ್ಸ್‌ಪಿರಿಯನ್ಸ್ ಕೇಂದ್ರವನ್ನು ತೆರೆದಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News