ಎಸ್ಸಿ-ಎಸ್ಟಿ ಹಾಸ್ಟೆಲ್ ನಿರ್ಮಾಣದಿಂದ ಸ್ಥಳೀಯರಿಗೆ ತೊಂದರೆ: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

Update: 2019-06-20 17:00 GMT

ಬೆಂಗಳೂರು, ಜೂ.20: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಟೌನ್‌ನಲ್ಲಿ ವಿದ್ಯಾರ್ಥಿನಿಯರ ಎಸ್ಸಿ-ಎಸ್ಟಿ ಹಾಸ್ಟೆಲ್ ನಿರ್ಮಾಣದಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ಮಾರಾ ನಾಯಕ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಮೊಳಕಾಲ್ಮೂರು ಟೌನ್‌ನಲ್ಲಿರುವ ಸಿಎ ನಿವೇಶನವನ್ನು ಸಾರ್ವಜನಿಕರ ಬಳಕೆಗಾಗಿ ನೀಡಲಾಗಿದೆ. ಆದರೆ, ಈ ಜಾಗದಲ್ಲಿ ಎಸ್ಸಿ-ಎಸ್ಟಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ, ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸಿಎ ನಿವೇಶನಕ್ಕೆ ಸಂಬಂಧಿಸಿದ ಕಾನೂನು ಅಂಶವನ್ನು ಮುಕ್ತವಾಗಿಡುತ್ತೇವೆ. ಆದರೆ, ಎಸಿ-ಎಸ್ಟಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣದಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂಬ ಅಂಶವನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ತಿಳಿಸಿ, ಪಿಐಎಲ್ ಅನ್ನು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News