ಕಾಮಾಕ್ಯ-ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್ ನಿರ್ಮಾಣ !

Update: 2019-06-20 17:06 GMT

ಬೆಂಗಳೂರು, ಜೂ. 20: ನಗರದ ಕಾಮಾಕ್ಯ ಚಿತ್ರಮಂದಿರ-ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸದಾ ವಾಹನದಿಂದ ತುಂಬಿರುವ ಈ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 125 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾಮಾಕ್ಯ, ಕತ್ರಿಗುಪ್ಪೆಮತ್ತು ಇಟ್ಟಮಡು ಮೂರು ಹೆಚ್ಚು ವಾಹನ ಸಂಚಾರ ದಟ್ಟಣೆ ಇರುವ ಸಿಗ್ನಲ್‌ಗಳಾಗಿವೆ.

ನಾಯಂಡಹಳ್ಳಿ ಬಳಿಯ ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಸಿಗ್ನಲ್ ಮುಕ್ತ ರಸ್ತೆ ನಿರ್ಮಿಸುವ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯದಿಂದ-ಇಟ್ಟಮಡು ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಗಂಟೆಗೆ 15 ಸಾವಿರ ಕಾರುಗಳು ಸಂಚಾರ ನಡೆಸುತ್ತವೆ.

ಬಿಬಿಎಂಪಿ ಮೊದಲು ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ 17.82 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿತ್ತು. ಆದರೆ, ಈಗ ಕಾಮಾಕ್ಯದಿಂದ ಇಟ್ಟಮಡು ಜಂಕ್ಷನ್ ತನಕ ಫ್ಲೈ ಓವರ್ ನಿರ್ಮಾಣ ಮಾಡುವುದರಿಂದ ಆ ಯೋಜನೆ ಕೈ ಬಿಡಲಾಗಿದೆ. ಈ ರಿಂಗ್ ರಸ್ತೆಯಲ್ಲಿ ಈಗಾಗಲೇ ದೇವೇಗೌಡ ಪೆಟ್ರೋಲ್ ಬಂಕ್ ಮತ್ತು ಪಿಇಎಸ್ ಕಾಲೇಜು ಬಳಿ ಫ್ಲೈ ಓವರ್ ನಿರ್ಮಾಣವಾಗಿದೆ. ಜನತಾ ಬಜಾರ್ ಬಳಿ ಅಂಡರ್ ಪಾಸ್ ಕೆಲಸ ನಡೆಯುತ್ತಿದೆ. ಈಗ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಆರಂಭವಾದರೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News