ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಸಂಚರಿಸುವವರ ತಲೆ ಮೇಲೆ ಬೀಳುತ್ತಿದೆ ಮಲ-ಮೂತ್ರ !

Update: 2019-06-20 17:16 GMT

ಬೆಂಗಳೂರು, ಜೂ.20: ರಾಜಧಾನಿಯ ರೈಲ್ವೆ ಮೇಲ್ಸೇತುವೆಗಳ ಮೇಲಿಂದ ಕೆಳಭಾಗದಲ್ಲಿ ಸಂಚರಿಸುವವರ ತಲೆ ಮೇಲೆ ಮಲ, ಮೂತ್ರ ಬೀಳುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಕೇಳಿ ಬರುತ್ತಿದೆ.

ಮಲ, ಮೂತ್ರ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಮೇಲೆ ಬೀಳುವವರೆಗೂ ಈ ಅವ್ಯವಸ್ಥೆಯಿಂದ ಸಾರ್ವಜನಿಕರು ಪಾರಾಗುವುದು ಅಸಾಧ್ಯವಾಗಿದೆ. ಬೆಳಗ್ಗೆ ಕಚೇರಿಗೆ ಅವಸರದಲ್ಲಿ ಹೊರಟ ಅನೇಕರು ರೈಲು ಹೋಗುತ್ತಿರುವುದನ್ನು ಗಮನಿಸದೆ ತ್ಯಾಜ್ಯವನ್ನು ಮೈ ಮೇಲೆ ಸುರಿಸಿಕೊಂಡು ಇಡೀ ದಿನವನ್ನು ಅಸ್ತವ್ಯಸ್ತ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಮಳೆ ಬಂದಾಗಲಂತೂ ವಾಹನ ಸವಾರರ ಸ್ಥಿತಿಯನ್ನು ಕೇಳುವವರೇ ಇಲ್ಲ.

ಮೆಜೆಸ್ಟಿಕ್, ಕೃಷ್ಣ ಮಿಲ್, ಕಿನೊ ಥಿಯೆಟರ್, ಕಂಟೊನ್ಮೆಂಟ್, ಓಕಳಿಪುರ, ಕೆ.ಆರ್.ಪುರ, ಮಹದೇವಪುರ ಸೇರಿ ಅನೇಕ ಕಡೆಗಳಲ್ಲಿ ಸರಿಯಾಗಿ ಮೇಲ್ಸೇತುವೆಗಳನ್ನು ನಿರ್ವಹಿಸುತ್ತಿಲ್ಲ. ಕೇವಲ ಕಬ್ಬಿಣದ ಶೀಟುಗಳನ್ನು ಹಾಕಿರುವ ಪರಿಣಾಮ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ. ರೈಲುಗಳು ಸಾಗುವವರೆಗೆ ವಾಹನಗಳು ರಸ್ತೆ ಮಧ್ಯದಲ್ಲೆ ನಿಲ್ಲುತ್ತಿರುವ ಪರಿಣಾಮ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.

ಮೆಜೆಸ್ಟಿಕ್ ಮುಖಾಂತರವಾಗಿ ಮಂತ್ರಿ ಮಾಲ್, ಮಲ್ಲೇಶ್ವರಂ, ರಾಜಾಜಿನಗರ ಸಂರ್ಪಸುವ ರಸ್ತೆಯಲ್ಲಿ ಸಂಚರಿಸುವ ಸವಾರರು ಒಂದಲ್ಲ ಒಂದು ರೈಲ್ವೆ ಮೇಲ್ಸೆತುವೆಯನ್ನು ದಾಟಲೇಬೇಕು. ಜಂಕ್ಷನ್ ಹೊಂದಿರುವುದರಿಂದ ನಿತ್ಯ ನೂರಾರು ರೈಲುಗಳು ಸಂಚರಿಸುತ್ತವೆ. ನಗರ ಪ್ರದೇಶದಲ್ಲಿ ರೈಲುಗಳು ನಿಧಾನವಾಗಿ ಚಲಿಸುವುದರಿಂದ ಪ್ರತಿ ಮೇಲ್ಸೆತುವೆಯನ್ನು ದಾಟಲು ಕನಿಷ್ಠ 5-6 ನಿಮಿಷ ಬೇಕಾಗುತ್ತದೆ. ಅಲ್ಲಿಯವರೆಗೆ ಬೈಕ್ ಸವಾರರು ರೈಲು ದಾಟುವುದನ್ನು ಕಾಯುತ್ತ ನಿಲ್ಲುತ್ತಾರೆ.

ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಈ ಸಮಸ್ಯೆಯಿಂದ ಸಂಚಾರ ಪೊಲೀಸರೂ ರೋಸಿ ಹೋಗಿದ್ದಾರೆ. ಬೈಕ್ ಸವಾರರು ಮೇಲ್ಸೆತುವೆ ಮುಂಭಾಗ ನಿಲ್ಲುವುದರಿಂದಾಗಿ ದೊಡ್ಡ ವಾಹನಗಳು ನಿಲ್ಲಬೇಕಾಗುತ್ತದೆ. ಪೊಲೀಸರ ಮಧ್ಯ ಪ್ರವೇಶದ ಹೊರತಾಗಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳುವುದಿಲ್ಲ. ಈ ಕಾರ್ಯಕ್ಕಾಗಿಯೇ ಹೆಚ್ಚು ಸಮಯ ವ್ಯಯಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News