6ನೇ ವೇತನಕ್ಕಾಗಿ ಕಾಲೇಜು ನೌಕರರ ಆಗ್ರಹ

Update: 2019-06-20 17:21 GMT

ಬೆಂಗಳೂರು, ಜೂ.20: ಆರ್.ವಿ.ಎಂಜಿನಿಯರಿಂಗ್ ಕಾಲೇಜಿನ ಬೋಧಕೇತರರಿಗೆ 6ನೇ ವೇತನಕ್ಕನುಗುಣವಾಗಿ ವೇತನ ನೀಡಬೇಕೆಂದು ಆರ್‌ವಿ ಸಿಇ ಬೋಧಕೇತರ ನೌಕರರ ಸಂಘ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಗುರುಬ್ರಹ್ಮ, ಆರ್.ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ 200 ಬೋಧಕೇತರ ಸಿಬ್ಬಂದಿ ಇದ್ದು, ಸರಕಾರ 6ನೇ ವೇತನ ಆಯೋಗದ ಸವಲತ್ತು ನೀಡುತ್ತಿಲ್ಲ. ಇದರಿಂದ ವೇತನದಲ್ಲಿ ತಾರತಮ್ಯ ಉಂಟಾಗುತ್ತಿದ್ದು, ನೌಕರರಿಗೆ 6ನೇ ವೇತನ ಜಾರಿಗೊಳಿಸಬೇಕು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ 1979ರಲ್ಲಿ ಕಾರ್ಮಿಕರಿಗೆ ಕರ್ನಾಟಕ ಸಿವಿಲ್ ಸರ್ವಿಸಸ್ ರೂಲ್ಸ್ ಹಾಗೂ ತಾಂತ್ರಿಕ ಕಾಲೇಜಿಗೆ ನೀಡಬೇಕಾಗಿರುವ ಸವಲತ್ತು ನೀಡಲಾಗುವುದೆಂದು ತಿಳಿಸಿದ್ದರೂ ಸಹ ಇದುವರೆಗೂ ಅನುಷ್ಠಾನಗೊಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಸಾರ್ವಜನಿಕ ದತ್ತಿ ಸಂಸ್ಥೆಯಾಗಿದ್ದು ಈ ಸಂಸ್ಥೆ ಎಲ್ಲ ನಿಯಮಾವಳಿಗಳನ್ನೂ ನಿರಂತರ ಉಲ್ಲಂಘನೆ ಮಾಡುತ್ತಿರುವುದರಿಂದ ಹಾಗೂ ಈ ಸಂಸ್ಥೆಯಲ್ಲಿ ನಡೆದಿರುವ ಹಲವಾರು ಆಡಳಿತಾತ್ಮಕ ನ್ಯೂನತೆ ಹಾಗೂ ಅವ್ಯವಹಾರಗಳ ಬಗ್ಗೆ ಸಂಘದ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ 100 ಪುಟಗಳ ದಾಖಲೆ ಸಲ್ಲಿಸಲಾಗಿದೆ ಎಂದರು.

ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿ ಬರುವ 230 ಕಾಲೇಜುಗಳಲ್ಲಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಬೋಧಕೇತರ ಸಿಬ್ಬಂದಿಗೆ ವೇತನ ಸೇರಿ ಇತರೆ ಸವಲತ್ತು ನೀಡದಿರದ ಬಗ್ಗೆ ಸರಕಾರ ಕ್ರಮವಹಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News