ಮೂರನೇ ಬಾರಿ ದ.ಆಫ್ರಿಕದ ಸೆಮಿ ಫೈನಲ್ ಕನಸು ಭಗ್ನಗೊಳಿಸಿದ ನ್ಯೂಝಿಲ್ಯಾಂಡ್

Update: 2019-06-20 18:40 GMT

ಬರ್ಮಿಂಗ್‌ಹ್ಯಾಮ್, ಜೂ.20: ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯ ಶತಕ ಹಾಗೂ ಆಲ್‌ರೌಂಡರ್‌ಗ್ರಾಂಡ್‌ಹೋಮ್ ಭರ್ಜರಿ ಬ್ಯಾಟಿಂಗ್‌ನ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ವಿಶ್ವಕಪ್‌ನ 25ನೇ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 241 ರನ್ ಗುರಿ ಪಡೆದ ಕಿವೀಸ್48.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ಟೂರ್ನಿಯಲ್ಲಿ ಆಡಿದ 5ನೇ ಪಂದ್ಯದಲ್ಲಿ 4ನೇ ಗೆಲುವು ದಾಖಲಿಸಿ ಒಟ್ಟು 9 ಅಂಕ ಗಳಿಸಿದ ಕಿವೀಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಆರು ಪಂದ್ಯದಲ್ಲಿ 4ನೇ ಸೋಲು ಕಂಡ ದಕ್ಷಿಣ ಆಫ್ರಿಕ ಸೆಮಿ ಫೈನಲ್ ರೇಸ್‌ನಿಂದ ಹೊರ ನಡೆಯಿತು.

ಕಿವೀಸ್ 137 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ಗ್ರಾಂಡ್‌ಹೋಮ್(60, 47 ಎಸೆತ, 5 ಬೌಂಡರಿ, 2 ಸಿಕ್ಸರ್)ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಿದ ವಿಲಿಯಮ್ಸನ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

 ಫೆಹ್ಲುಕ್ವಾಯೋ ಎಸೆದ 49ನೇ ಓವರ್‌ನ 2 ಹಾಗೂ 3ನೇ ಎಸೆತವನ್ನು ಸಿಕ್ಸರ್ ಹಾಗೂ ಬೌಂಡರಿಗೆ ಅಟ್ಟಿದ ವಿಲಿಯಮ್ಸನ್ 138 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕ ಪೂರೈಸುವ ಜೊತೆಗೆ ಇನ್ನೂ 3 ಎಸೆತಗಳು ಬಾಕಿ ಉಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಕಿವೀಸ್ 2.1ನೇ ಓವರ್‌ನಲ್ಲಿ 12 ರನ್ ಗಳಿಸುವಷ್ಟರಲ್ಲಿ ಆರಂಭಿಕ ದಾಂಡಿಗ ಕಾಲಿನ್ ಮುನ್ರೊ(9) ರಬಾಡ ಬೌಲಿಂಗ್‌ನಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ಎರಡನೇ ವಿಕೆಟ್‌ಗೆ 60 ರನ್ ಸೇರಿಸಿದ ಇನ್ನೋರ್ವ ಆರಂಭಿಕ ಆಟಗಾರ ಗಪ್ಟಿಲ್(35, 59 ಎಸೆತ, 5 ಬೌಂಡರಿ) ಹಾಗೂ ನಾಯಕ ವಿಲಿಯಮ್ಸನ್ ತಂಡಕ್ಕೆ ಆಸರೆಯಾದರು.

 ಈ ಜೋಡಿಯನ್ನು ಫೆಹ್ಲುಕ್ವಾವೊ(1-21) ಬೇರ್ಪಡಿಸಿದರು. ಗಪ್ಟಿಲ್ ಔಟಾದ ಬೆನ್ನಿಗೆ ರಾಸ್ ಟೇಲರ್(1), ಲಥಾಮ್(1) ಪೆವಿಲಿಯನ್‌ಗೆ ಪರೇಡ್ ನಡೆಸಿದರು. ವಿಲಿಯಮ್ಸನ್ ಹಾಗೂ ನೀಶಾಮ್(23) 5ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿ ಕುಸಿತವನ್ನು ತಡೆದರು. ದ.ಆಫ್ರಿಕದ ಪರ ಕ್ರಿಸ್ ಮೊರಿಸ್(3-49)ಯಶಸ್ವಿ ಬೌಲರ್ ಎನಿಸಿಕೊಂಡರು. ರಬಾಡ(1-42) ಹಾಗೂ ಫೆಹ್ಲುಕ್ವಾಯೊ(1-47)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News